ನಿರಂತರವಾಗಿ ಹೆಚ್ಚುತ್ತಿರುವ ಟೊಮೆಟೊ ಬೆಲೆ: ಕಾರಣ ಏನು?
ಬೆಂಗಳೂರು: ಕಳೆದ ಮೂರು ವಾರಗಳಿಂದ ಟೊಮೆಟೊ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಭಾರೀ ಮಳೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ರೈತರು ಟೊಮೆಟೊ ಬೆಳೆದಿಲ್ಲ. ಜೊತೆಗೆ ಟೊಮೆಟೊ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ಉತ್ಪಾದನೆಯಲ್ಲಿ ಕುಸಿತವಾಗಿದೆ. ಈ ಕಾರಣಗಳಿಗಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಪೂರೈಕೆಯಲ್ಲಿ ಕುಸಿತವಾಗಿದೆ ಎಂದು ಹೋಲ್ ಸೇಲ್ ಮಾರಾಟಗಾರೊಬ್ಬರು ಹೇಳಿದ್ದಾರೆ.
ಕೇವಲ ಭಾರಿ ಮಳೆಯ ಕಾರಣಕ್ಕೆ ಮಾತ್ರ ಬೆಲೆ ಹೆಚ್ಚಳವಾಗಿಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಟೊಮೆಟೊಗೆ ಒಂದಲ್ಲ ಒಂದು ರೋಗ ತಗುಲುತ್ತಿದೆ. ಇದರಿಂದಲೂ ಇಳುವರಿ ಕಡಿಮೆಯಾಗಿದೆ. ಕಳೆದ ಐದಾರು ವರ್ಷಗಳಿಂದ ಟೊಮೆಟೊ ಬೆಳೆಯನ್ನು ನಾಶ ಮಾಡುವ ಬ್ಲೈಟ್ ಎಂಬ ರೋಗ ಮತ್ತು ಚುಕ್ಕಿ ರೋಗ ನಿರಂತರವಾಗಿ ಕಾಡುತ್ತಿದೆ.
ಉತ್ತಮ ಬೆಲೆ ಸಿಗುತ್ತದೆ ಎಂದು ಕೋಲಾರದ ಬಹುತೇಕ ರೈತರು ಟೊಮೆಟೊ ಬೆಳೆಯಲು ಆರಂಭಿಸಿದ್ದರು. ಇದಕ್ಕಾಗಿ ಹೆಚ್ಚಿನ ಬಂಡವಾಳವನ್ನೂ ಹೂಡಿದ್ದರು. ಆದರೆ ಇಳುವರಿಯಲ್ಲಿ ಕುಂಠಿತವಾಯಿತು. ಅಚ್ಚರಿ ಎಂಬಂತೆ ಟೊಮೆಟೊ ಜೀವಿತಾವಧಿ 48 ಗಂಟೆಗಳಿಗೆ ಕುಸಿದಿದ್ದು, ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ರೈತರು ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರ ನೆರೆಯ ದೇಶಗಳು ಮತ್ತು ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಕಳುಹಿಸುತ್ತಿದ್ದರು. ಆದರೆ, ಈಗ ಟೊಮೆಟೊ ಬಹಳ ಬೇಗ ಕೆಡುತ್ತಿರುವುದರಿಂದ ಇಲ್ಲಿಯೇ ಉಳಿದಿದೆಯಂತೆ.
ಹವಾಮಾನ ವೈಪರೀತ್ಯದಿಂದ ಟೊಮೆಟೊ ಕೆಡುತ್ತಿದೆ ಎಂದು ಹೇಳುವ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೀಟನಾಶಕ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ. ಆದರೆ, ಇದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ಬದಲಾಗಿ ಮುಂದಿನ ಬೆಳೆಗೆ ಭೂಮಿಯನ್ನು ಹೇಗೆ ಸಿದ್ಧಪಡಿಸಬೇಕು ಎಂದು ರೈತರಿಗೆ ಪ್ರಾತ್ಯಕ್ಷಿಕೆ ನೀಡಬೇಕು. ಆಗ ಮಾತ್ರ ರೈತರಿಗೆ ಸಹಾಯವಾಗುತ್ತದೆ ಎನ್ನುತ್ತಾರೆ ರೈತರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97