ಅಡಿಕೆ ಬೆಳೆ ವಿಸ್ತರಣೆ ಅಡಿಕೆ ಬೆಳೆಗಾರರಿಗೆ ಮಾರಕವಾಗಲಿದೆ: ಬಿ.ರಮಾನಾಥ ರೈ
ಅಡಿಕೆ ಬೆಳೆ ವಿಸ್ತರಣೆ ಭವಿಷ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಮಾರಕವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ನೀಡಿರುವ ಹೇಳಿಕೆ ಅಡಿಕೆ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರಿ ಅಡಿಕೆ ಬೆಳೆಗಾರರ ಸಂಕಷ್ಟ ಹೆಚ್ಚಾಗುವ ಆತಂಕವಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ಮಲ್ಲಿಕಟ್ಟೆಯಲ್ಲಿರೋ ದ.ಕ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಗೃಹ ಸಚಿವರ ಹೇಳಿಕೆ ರೈತರಲ್ಲಿ ಆಘಾತವನ್ನುಂಟು ಮಾಡಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ.50 ರಷ್ಟು ಕರ್ನಾಟಕದಲ್ಲೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಗೆ ಚುಕ್ಕಿರೋಗದಿಂದಾಗಿ ಬೆಳೆಗಾರರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ರಾಸಾಯನಿಕ ಗೊಬ್ಬರ, ಕೃಷಿ ಉಪಕರಣಗಳ ಬೆಲೆಯೂ ಹೆಚ್ಚಾಗಿದೆ.
ಇದೀಗ ಗೃಹ ಸಚಿವರ ಹೇಳಿಕೆಯಿಂದ ಬೆಲೆ ಕುಸಿತವಾಗುವ ಆತಂಕವಿದೆ. ಬಂಡವಾಳ ಶಾಹಿಗಳ ಪ್ರಭಾವದಿಂದಾಗಿ ಅವರ ಪರವಾಗಿಯೇ ಕೆಲಸ ಮಾಡುತ್ತಿರುವ ಬಿಜೆಪಿ ಸರಕಾರ ಇದೀಗ ಮತ್ತೊಮ್ಮೆ ರೈರವಿರೋಧಿ ವರ್ತನೆ ತೋರಿಸಿದೆ. ಹಿಂದೆ ಕಾಂಗ್ರೆಸ್ ಸರಕಾರ ವಿದ್ದಾಗ ಅಡಿಕೆಗೆ ಬೆಂಬಲ ಬೆಲೆ ನೀಡಿ ಪ್ರೋತ್ಸಾಹಿಸಿತ್ತು. ಆದರೆ ಬಿಜೆಪಿ ಸರಕಾರ ಅಡಿಕೆ ಬೆಳೆಗಾರರ ಬೆನ್ನೆಲುಬು ಮುರಿಯುತ್ತಿದೆ. ಸಾಲ ಮಾಡಿ ಅಡಿಕೆ ಬೆಳೆದವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಸಚಿವರು ಕುಳಗಳ ಒತ್ತಡದಿಂದಾಗಿ ಈ ಹೇಳಿಕೆ ನೀಡಿದ್ದಾರೆ. ಅಡಿಕೆಗೆ ಪ್ರೋತ್ಸಾಹ ಬೇಡ ವೆಂದು ಸಚಿವರು ಹೇಳುತ್ತಿದ್ದಾರೆ. ಹಾಗಾದರೆ ಹಲವು ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಯಾಕೆ? ಕೆಲವು ದೇಶಗಳಿಂದ ಕಳ್ಳಸಾಗಣಿಕೆಯೂ ಆಗುತ್ತಿದ್ದು ಅದನ್ನು ತಡೆಯುತ್ತಿಲ್ಲ ಯಾಕೆ ಎಂದು ರೈ ಪ್ರಶ್ನಿಸಿದರು. ಸಚಿವರ ಹೇಳಿಕೆ ಖಂಡಿಸಿ ಶನಿವಾರ ಕಾಂಗ್ರೆಸ್ ಕಿಸಾನ್ ಘಟಕದಿಂದ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈ ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka