36 ಸರ್ಕಾರಿ ಅಧಿಕಾರಿಗಳನ್ನ ವಂಚಿಸಿದ ನಕಲಿ ಲೋಕಾಯುಕ್ತ ಅಧಿಕಾರಿ ಅರೆಸ್ಟ್!: 36 ಅಧಿಕಾರಿಗಳ ಪೈಕಿ ದೂರು ಕೊಟ್ಟದ್ದು ಒಬ್ಬ ಮಾತ್ರ! - Mahanayaka
5:03 AM Thursday 21 - November 2024

36 ಸರ್ಕಾರಿ ಅಧಿಕಾರಿಗಳನ್ನ ವಂಚಿಸಿದ ನಕಲಿ ಲೋಕಾಯುಕ್ತ ಅಧಿಕಾರಿ ಅರೆಸ್ಟ್!: 36 ಅಧಿಕಾರಿಗಳ ಪೈಕಿ ದೂರು ಕೊಟ್ಟದ್ದು ಒಬ್ಬ ಮಾತ್ರ!

05/01/2024

ಬೆಂಗಳೂರು: ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯೋರ್ವವನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶ್ರೀನಾಥ್ ರೆಡ್ಡಿ(34) ಬಂಧಿತ ಆರೋಪಿಯಾಗಿದ್ದಾನೆ. ಈತ 2007ರಿಂದಲೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಮೊದಮೊದಲು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದವನು, ಬಳಿಕ ಸರ್ಕಾರಿ ಅಧಿಕಾರಿಗಳ ತಿಜೋರಿಗೆ ಕನ್ನ ಹಾಕಲು ಆರಂಭಿಸಿದ್ದ ಎಂದು ತಿಳಿದು ಬಂದಿದೆ.

ಈತನಿಗೆ ಕಳ್ಳತನ ಮಾಡಲು ತೆಲುಗು ಚಿತ್ರಗಳ ಕೆಲವು ದೃಶ್ಯಗಳು ಪ್ರೇರಣೆಯಾಗಿತ್ತಂತೆ,  ಈತ ಈವರೆಗೆ ಸುಮಾರು 36 ಸರ್ಕಾರಿ ಅಧಿಕಾರಿಗಳನ್ನು ವಂಚಿಸಿದ್ದಾನೆ. ಆದ್ರೆ ಅಚ್ಚರಿ ಏನಂದ್ರೆ, ಒಬ್ಬ ಸರ್ಕಾರಿ ಅಧಿಕಾರಿ ಮಾತ್ರವೇ ಈತನ ವಿರುದ್ಧ ದೂರು ದಾಖಲಿಸಿದ್ದಾರೆ.

ಲೋಕಾಯುಕ್ತ ಇನ್ಸ್ ಪೆಕ್ಟರ್ ಚಂದ್ರಶೇಖರ್ ಎಂದು ಹೇಳಿಕೊಂಡು ರೆಡ್ಡಿ ಸರ್ಕಾರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ. ಅವರ ಪ್ರಕರಣಗಳನ್ನು ಮುಚ್ಚಲು ಹಣ ನೀಡುವಂತೆ ಧಮಕಿ ಹಾಕುತ್ತಿದ್ದ. ಅವರು ಕಾಡಿಬೇಡಿದ ನಂತರ ಲೋಕಾಯುಕ್ತದ ತಾಂತ್ರಿಕ ವಿಭಾಗ ಯಾವುದೇ ವಿಚಾರಣೆ ನಡೆಸದೆ ಬಿ ರಿಪೋರ್ಟ್ ಸಲ್ಲಿಸಲಿದೆ ಎಂದು ಭರವಸೆ ನೀಡುತ್ತಿದ್ದ.




ಇದೇ ರೀತಿಯಲ್ಲಿ ಸರ್ಕಾರಿ ಅಧಿಕಾರಿ ರಾಮದಾಸ್ ಎಂಬವರಿಗೂ ಬೆದರಿಕೆ ಹಾಕಿದ್ದ. ಆದ್ರೆ ಅವರು ಈತನ ವಿರುದ್ಧ ದೂರು ದಾಖಲಿಸಿದ್ದರು. ಅಂತೆಯೇ ಆರೋಪಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಲೋಕಾಯುಕ್ತದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಎಂದು ಹೇಳಿಕೊಂಡು ರೆಡ್ಡಿ ಕೇಶವ ರಾವ್ ಹೆಸರನ್ನೂ ಬಳಸಿಕೊಂಡಿದ್ದನು. ಈತನ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಹೆಬ್ಬಗೋಡಿ, ಅತ್ತಿಬೆಲೆ, ಜಿಗಣಿ ಸೇರಿದಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಿವೆ. ಸಿದ್ದಾಪುರ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಈತ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿದ್ದಾನೆ ಎನ್ನಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಸರ್ಕಾರಿ ಅಧಿಕಾರಿಗಳನ್ನು ಈತ ವಂಚಿಸಿದ್ದಾನೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ