ಗ್ರಹಣದ ಬಗ್ಗೆ ಸುಳ್ಳು ಸುದ್ದಿ: ಸರ್ಕಾರಕ್ಕೆ ಸುದ್ದಿ ವಾಹಿನಿಗಳು, ಜ್ಯೋತಿಷಿಗಳ ವಿರುದ್ಧ ಕ್ರಮಕೈಗೊಳ್ಳುವ ತಾಕತ್ ಇದೆಯಾ?
![eclipse](https://www.mahanayaka.in/wp-content/uploads/2023/10/eclipse.jpg)
ಭಾರತ ಚಂದ್ರನ ಅಂಗಳಕ್ಕೆ ಕಾಲಿಟ್ಟಿದೆ. ಸೂರ್ಯನ ಸಮೀಪಕ್ಕೂ ತೆರಳಿ ಅಧ್ಯಯನ ನಡೆಸುತ್ತಿದೆ. ಇತ್ತೀಚೆಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದು ಯಶಸ್ವಿಯಾಗಿ ಇಡೀ ಪ್ರಪಂಚಕ್ಕೆ ತನ್ನ ಶಕ್ತಿ ತೋರಿಸಿದೆ. ಭಾರತ ಮುಂದಿನ ಪೀಳಿಗೆಯಾದ ಮಕ್ಕಳ ಮೇಲೆ ಚಂದ್ರಯಾನ ಬಹಳ ಪ್ರಭಾವ ಬೀರಿದೆ. ಯುವಕರು, ವೃದ್ಧರು, ಮಹಿಳೆಯರು ಸೇರಿದಂತೆ ದೇಶದ ಪ್ರಜೆಗಳು ಚಂದ್ರಯಾನವನ್ನು ಕೊಂಡಾಡಿದ್ದಾರೆ. ಆದರೆ, ಚಂದ್ರ ಗ್ರಹಣ ಈ ಬಾರಿ ಬರುತ್ತಿದ್ದಂತೆಯೇ ಇವರೆಲ್ಲರನ್ನೂ ದಿಕ್ಕು ತಪ್ಪಿಸಲು ಮತ್ತೆ ಮೌಢ್ಯಕ್ಕೆ ತಳ್ಳಲು ಟಿವಿ ಜ್ಯೋತಿಷಿಗಳು ಹಾಗೂ ಟಿವಿ ಚಾನೆಲ್ ಗಳು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಗ್ರಹಣ ಎನ್ನುವುದು ಒಂದು ಪ್ರಕೃತಿಯ ವಿಸ್ಮಯ. ಆದ್ರೆ ಇದರಿಂದ ಜನರಿಗೆ ಏನೋ ತೊಂದರೆಯಾಗುತ್ತದೆ ಎಂದು ಹಸಿ ಹಸಿ ಸುಳ್ಳುಗಳನ್ನು ಟಿವಿ ಚಾನೆಲ್ ಗಳಲ್ಲಿ ಜ್ಯೋತಿಷಿಗಳು ಹೇಳುತ್ತಿದ್ದಾರೆ. ಜ್ಯೋತಿಷ್ಯ ಎನ್ನುವುದು ಪ್ರಕೃತಿಯ ಬದಲಾವಣೆಗಳು, ಪ್ರಕೃತಿ ವಿಕೋಪಗಳನ್ನು ಅಂದಾಜಿಸುವ ಒಂದು ಪ್ರಕ್ರಿಯೆಯಾಗಿತ್ತು. ಆದ್ರೆ ಇದೀಗ ಕೆಲವರಿಗೆ ಹಣಮಾಡುವ ದಂಧೆಯಾಗಿದ್ದು, ಜ್ಯೋತಿಷ್ಯದ ಹೆಸರನ್ನೇ ದುರ್ಬಳಕೆ ಮಾಡಿಕೊಂಡು, ಚಂದ್ರ ಗ್ರಹಣದಿಂದ ಜನರಿಗೆ ಏನೇನೋ ಕಂಟಕ, ಅಪಾಯಗಳು ಸಂಭವಿಸುತ್ತವೆ ಎಂದು ಸುಳ್ಳುಗಳ ಸರಮಾಲೆಗಳನ್ನು ಸುದ್ದಿವಾಹಿನಿಗಳಲ್ಲಿ ಹೇಳುತ್ತಿದ್ದಾರೆ.
ಚಂದ್ರಯಾನದ ಸಂದರ್ಭದಲ್ಲಿ ವಿಜ್ಞಾನ ದೇಶ ಪ್ರೇಮ ಅದು ಇದು ಎಂದು ಮಾತನಾಡುತ್ತಿದ್ದ ಕನ್ನಡ ಸುದ್ದಿವಾಹಿನಿಗಳು ಇದೀಗ ಚಂದ್ರ ಗ್ರಹಣದ ಸಂದರ್ಭದಲ್ಲಿ ವಿಜ್ಞಾನ ಮತ್ತು ಗ್ರಹಣದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲದ ಯಾರನ್ನೋ ಕರೆತಂದು ಜ್ಯೋತಿಷಿ ಎಂಬ ಪಟ್ಟಕಟ್ಟಿ ಕಂಟಕ, ಅಪಾಯ, ಶನಿ ಅಂತ ಸುಳ್ಳು ಹರಡುತ್ತಿವೆ. ನೀವು ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಮುಟ್ಟಿನೋಡಿಕೊಳ್ಳಬಾರದೇಕೆ?
ಮೌಢ್ಯ ಹರಡುವವರ ವಿರುದ್ಧ ಸರ್ಕಾರ ಮೌನ:
ಮೌಢ್ಯ ಎನ್ನುವುದು ಧಾರ್ಮಿಕ ಭಾವನೆ ಅಲ್ಲ, ಗ್ರಹಣ ಎನ್ನುವುದು ಒಂದು ಪ್ರಕೃತಿಯ ವಿಸ್ಮಯ ಇದನ್ನು ಭಾರತದ ಭವಿಷ್ಯದ ಮಕ್ಕಳು ನೋಡಿ, ಗ್ರಹಣದ ಬಗ್ಗೆ ತಿಳಿದು ಕೊಳ್ಳಬೇಕು. ಆದ್ರೆ ಗ್ರಹಣದ ಹಿಂದಿನ ದಿನದಿಂದಲೇ ಸುದ್ದಿವಾಹಿನಿಗಳಲ್ಲಿ ಗ್ರಹಣದ ಬಗ್ಗೆ ತಪ್ಪು ತಪ್ಪಾದ ಮಾಹಿತಿಗಳನ್ನು ಹರಡಲಾಗುತ್ತಿದೆ. ಗ್ರಹಣ ಎನ್ನುವುದು ದೋಷ ಎನ್ನುವಂತೆ ಬಿಂಬಿಸಲಾಗುತ್ತಿದೆ. ಗ್ರಹಣದ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸುವ ಸುದ್ದಿವಾಹಿನಿಗಳು ಹಾಗೂ ಅದರಲ್ಲಿ ಕುಳಿತು ಜನರನ್ನ ದಾರಿ ತಪ್ಪಿಸುವ ಜ್ಯೋತಿಷಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.