ಜಾನುವಾರು ಕಟ್ಟಲು ಹೋದ ರೈತ ಹೊಳೆಗೆ ಜಾರಿ ಬಿದ್ದು ನೀರುಪಾಲು!
ಚಿಕ್ಕಮಗಳೂರು: ಜಾನುವಾರು ಕಟ್ಟಲು ಹೋದಾಗ ರೈತರೊಬ್ಬರು ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಬೈದುವಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.
ಬೈದುವಳ್ಳಿ ಗ್ರಾಮದ ಕೃಷಿಕ ಬಿ.ಎಲ್. ಗೋಪಾಲಗೌಡ(63 ವರ್ಷ) ಎಂಬುವವರು ಇಂದು ಸುಮಾರು 9:30 ರ ಸಮಯದಲ್ಲಿ ಜಾನುವಾರುಗಳನ್ನು ಕಟ್ಟಲು ಹೋದಾಗ ಆಕಸ್ಮಿಕವಾಗಿ ತುಂಬಿಹರಿಯುತ್ತಿದ್ದ ಹೇಮಾವತಿ ಉಪನದಿಗೆ ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ಗೋಪಾಲ್ ಮೇಲೇಳಲಾಗದೇ ಹೊಳೆಯ ಹರಿವಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವಿವಾಹಿತರಾಗಿದ್ದ ಗೋಪಾಲ್ ಗೌಡ ಅವರು ಕೃಷಿಕರಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅವರಿಗಾಗಿ ಶೋಧ ನಡೆಸಿದ್ದು ಪತ್ತೆಯಾಗಿಲ್ಲ. ಸ್ಥಳಕ್ಕೆ ಗೋಣಿಬೀಡು ಪೊಲೀಸರ, ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಸಂಜೆ ಐದು ಗಂಟೆಯವರೆಗೂ ಗೋಪಾಲ್ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅಗ್ನಿಶಾಮಕ ದಳದೊಂದಿಗೆ, ಸಮಾಜಸೇವಕರಾದ ಫಿಶ್ ಮೋಣು, ಆರೀಫ್ ಬಣಕಲ್ ಮತ್ತು ಅವರ ತಂಡದವರು ನದಿಯಲ್ಲಿ ಶವಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿಯವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಗೋಣಿಬೀಡು ಎಸ್.ಐ. ಹರ್ಷಗೌಡ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬೈದವಳ್ಳಿ ಸೇತುವೆ ಬಳಿ ಬೆಳಿಗ್ಗೆಯಿಂದ ಸುತ್ತಮುತ್ತಲ ನೂರಾರು ಜನರು ಜಮಾವಣೆಯಾಗಿ ಕಾರ್ಯಾಚರಣೆ ವೀಕ್ಷಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: