ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆಯನ್ನು ಕೂಡಲೇ ನಿರ್ಮಿಸುವಂತೆ ಆಗ್ರಹಿಸಿ ದಿ ಕಾಮನ್ ಪೀಪಲ್ಸ್ ವೆಲ್ಪೇರ್ ಫೌಂಡೇಶನ್ ವತಿಯಿಂದ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಫೌಂಡೇಶನ್ ನ ರಾಷ್ಟ್ರೀಯ ಅಧ್ಯಕ್ಷ ಜಿ.ಎ.ಕೋಟೆಯಾರ್ ಮಾತನಾಡಿ, ಕೇಂದ್ರ ಸರಕಾರವು ಕಾರ್ಮಿಕ ವಿಮಾ ಯೋಜನೆಯಡಿ ಉಡುಪಿ ಜಿಲ್ಲೆಗೆ 100 ಹಾಸಿಗೆಯ ಸೂಪರ್ ಸ್ಪೆಶಾಲಿಟಿ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡಿದೆ. ಇಂದಿಗೆ ಮೂರು ವರ್ಷ ಕಳೆದರೂ ಈವರೆಗೆ ಆಸ್ಪತ್ರೆಗೆ ಅಡಿಪಾಯ ಹಾಕಿಲ್ಲ. ಇದಕ್ಕೆ ಖಾಸಗಿ ಆಸ್ಪತ್ರೆ ಹಾಗೂ ರಾಜಕಾರಣಿಗಳ ಪ್ರಭಾವದಿಂದ ಕಾರಣ ಎಂದು ದೂರಿದರು.
ಇಎಸ್ಐ ಕಾನೂನಿನ ಪ್ರಕಾರ 60ಸಾವಿರಕ್ಕಿಂತ ಹೆಚ್ಚು ಇಎಸ್ಐ ಸದಸ್ಯರಿದ್ದ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಿಸಲೇ ಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ವಿಮಾ ಯೋಜನೆಯ ಸದಸ್ಯರಾಗಿದ್ದಾರೆ. ಅದೇ ರೀತಿ ಸುಮಾರು 5ಲಕ್ಷದವರೆಗೆ ಫಲಾನುಭವಿಗಳಿದ್ದಾರೆ. ಆದುದರಿಂದ ಕಾನೂನಾತ್ಮಕವಾಗಿ ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ ಆಗಲೇ ಬೇಕು ಎಂದು ಅವರು ಒತ್ತಾಯಿಸಿದರು.
ಧರಣಿಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷೆ ಗೀತಾ ಪೂಜಾರಿ, ಪ್ರಮುಖ ರಾದ ಪ್ರವೀಣ್ ಕುಮಾರ್, ಮುಹಮ್ಮದ್, ಕಮಲಾಕ್ಷ, ಸುರೇಶ್ ಭಂಡಾರಿ, ಅಶೋಕ್ ತೋನ್ಸೆ, ಜಯ ಪೂಜಾರಿ, ಪವಿತ್ರಾ, ಸರಿತಾ, ಜ್ಯೋತಿ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.