ಕೋಳಿ ಪದಾರ್ಥ ಖಾಲಿ ಮಾಡಿದ್ದಕ್ಕೆ ಮಗನನ್ನೇ ಕೊಂದ ಪಾಪಿ ತಂದೆ!
ದಕ್ಷಿಣ ಕನ್ನಡ: ಕೋಳಿ ಪದಾರ್ಥದ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ಆರಂಭವಾದ ಜಗಳ, ಮಗನ ಬರ್ಬರ ಹತ್ಯೆಯೊಂದಿಗೆ ಅಂತ್ಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ.
ಶಿವರಾಮ(32) ತಂದೆಯಿಂದಲೇ ಹತ್ಯೆಗೀಡಾದ ಮಗನಾಗಿದ್ದಾನೆ. ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ತನ್ನ ಪುತ್ರನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ತಂದೆಯಾಗಿದ್ದಾನೆ.
ನಿನ್ನೆ ರಾತ್ರಿ 12 ಗಂಟೆಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಗಿತ್ತೆನ್ನಲಾಗಿದೆ. ಮನೆಯಲ್ಲಿ ಕೋಳಿ ಪದಾರ್ಥ ಮಾಡಿದ್ದು, ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತು ಎನ್ನಲಾಗಿದೆ. ಇದನ್ನು ಆಕ್ಷೇಪಿಸಿ ಶೀನ ಮಾತನಾಡತೊಡಗಿದಾಗ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಕೋಪಗೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದಿದ್ದಾನೆನ್ನಲಾಗಿದೆ. ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆದಿದ್ದು, ಇದರಿಂದ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತ ದೇಹ ಕಡಬ ಆಸ್ಪತ್ರೆಯಲ್ಲಿಡಲಾಗಿದೆ.
ಮೃತ ಶಿವರಾಮ ಅವರು ಮದುವೆಯಾಗಿ 9 ವರ್ಷ ಆಗಿದ್ದು, ಆರು ಮತ್ತು ಒಂದು ವರ್ಷದ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ, ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ಪೋಲೀಸ್ ಸಿಬ್ಬಂದಿಗಳು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw