ಶಾಕಿಂಗ್ ನ್ಯೂಸ್: ಕೊರೊನಾ ಲಸಿಕೆ ವಿತರಣೆ ಸಂಸ್ಥೆಯ ಕಟ್ಟಡದಲ್ಲಿ ಬೆಂಕಿ ಅವಘಡ - Mahanayaka
9:41 AM Wednesday 5 - February 2025

ಶಾಕಿಂಗ್ ನ್ಯೂಸ್: ಕೊರೊನಾ ಲಸಿಕೆ ವಿತರಣೆ ಸಂಸ್ಥೆಯ ಕಟ್ಟಡದಲ್ಲಿ ಬೆಂಕಿ ಅವಘಡ

21/01/2021

ಪುಣೆ: ದೇಶದ ಕೊವಿಶೀಲ್ಡ್ ಕೊರೊನಾ ಲಸಿಕೆ ವಿತರಕ ಸಂಸ್ಥೆ ಸೀರಮ್ ಇನ್ಸ್ಟಿಟ್ಯೂಟ್ ನ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಬೆಂಕಿ ತಗಲಿದ್ದು,  ಲಸಿಕೆ ತಯಾರಕ ಘಟಕಗಳ ಪಕ್ಕದಲ್ಲೇ ಇರುವ ನಿರ್ಮಾಣ ಹಂತದ ಕಟ್ಟಡಕ್ಕೆ ಬೆಂಕಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು,  ಒಟ್ಟು 10 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.  ಸಂಸ್ಥೆಯ ವಿತರಣಾ ಘಟಕದಿಂದ ಸ್ವಲ್ಪವೇ ದೂರದಲ್ಲಿರುವ ಮಂಜರಿ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಕಟ್ಟಡದ 3, 4, 5ನೇ ಮಹಡಿಯಲ್ಲಿ ಬೆಂಕಿ ತೀವ್ರವಾಗಿದ್ದು, ತನ್ನ ಕೆನ್ನಾಲಿಗೆ ಚಾಚಿದ್ದು, ಪಕ್ಕದ ಕಟ್ಟಡಗಳಿಗೂ ವ್ಯಾಪಿಸುವ ಆತಂಕವನ್ನು ತಂದೊಡ್ಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ.

ಕೊರೊನಾ ಲಸಿಕೆ ತಯಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದೀಗ ಹೊಸ ಕಟ್ಟಡದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಬೆಂಕಿ ಅವಘಡಕ್ಕೆ  ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ  ಸೀರಮ್ ಇನ್ಸ್ಟಿಟ್ಯೂಟ್ ಕೂಡ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ