ಬೆಂಗಳೂರಿನಲ್ಲಿ ಐದು ಹೊಸ ಟ್ರಾಫಿಕ್ ಪೊಲೀಸ್ ಠಾಣೆ
ಬೆಂಗಳೂರು: ಬೆಂಗಳೂರಿನಲ್ಲಿ ಹೊಸದಾಗಿ ಐದು ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಿ, ಒಬ್ಬರು ಡಿಸಿಪಿ, ಸಿಬ್ಬಂದಿ, ವಾಹನ ಹಾಗೂ ಎಲ್ಲಾ ಸಲಕರಣೆಗಳನ್ನು ಸರ್ಕಾರ ಒದಗಿಸುತ್ತಿದೆ. ವಾಹನ ದಟ್ಟಣೆಯನ್ನು ಸಂಪೂರ್ಣ ನಿಯಂತ್ರಿಸುವ ಉದ್ದೇಶವಿದ್ದು, 12 ಕಾರಿಡಾರ್ ರಸ್ತೆಗಳನ್ನು ಕೂಡ ಹೊಸದಾಗಿ ನಿರ್ಮಿಸುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಹೆಚ್.ಎ.ಎಲ್. ವಿಮಾನನಿಲ್ದಾಣದ ವಾರ್ಡ್ , ಮಹದೇವಪುರ ವಲಯ ವ್ಯಾಪ್ತಿಯಲ್ಲಿನ ಸುರಂಜನ್ದಾ ಸ್ ಜಂಕ್ಷನ್ ಬಳಿಯ ಕೆಳಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇಂದು ಲೋಕಾರ್ಪಣೆಯಾಗಿರುವ ಕೆಳಸೇತುವೆ ಯಿಂದಾಗಿ ವೈಟ್ ಫೀಲ್ಡ್ ನಿಂದ ಹಿಡಿದು ಎಂಜಿ ರಸ್ತೆಯವರೆಗೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ವಾಹನಗಳು ಇನ್ನು ಮುಂದೆ ಸುಗಮವಾಗಿ ಸಂಚಾರ ಮಾಡಬಹುದಾಗಿದೆ. ಹಿಂದೆ ಒಮ್ಮೆ ಎಚ್ ಎ ಎಲ್ ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ನೋಡಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕೆಲಸವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿರುವ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.
ದೀರ್ಘಾವಧಿ ಮತ್ತು ಅಲ್ಪಾವಧಿ ಕಾರ್ಯಕ್ರಮ:
ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರ. ಪ್ರತಿನಿತ್ಯ 5 ಸಾವಿರ ವಾಹನಗಳು ರಸ್ತೆಗಿಳಿಯುತ್ತವೆ. ಬೆಂಗಳೂರಿನಲ್ಲಿ ಪ್ರತಿ ದಿನ 10 ಲಕ್ಷ ಜನ ಬಂದುಹೋಗುವವರಿದ್ದಾರೆ. ಇದರ ಪರಿಹಾರಕ್ಕೆ ಹಲವಾರು ದೀರ್ಘಾವಧಿ ಮತ್ತು ಅಲ್ಪಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಸಂಚಾರ ಸುಗಮಗೊಳಿಸಲು ಅಮೃತ ನಗರೋತ್ಥಾನದಲ್ಲಿ 11 ಮೇಲ್ಸೇತುವೆಗಳನ್ನು ಕೈಗೊಂಡಿದ್ದು ಅನುಮೋದನೆಯನ್ನೂ ನೀಡಲಾಗಿದೆ. ಬೆಂಗಳೂರಿನ ಇತಿಹಾಸದಲ್ಲಿಯೇ ಒಂದೇ ವರ್ಷ 11 ಮೇಲ್ಸೇತುವೆಗಳಿಗೆ ಅನುಮೋದನೆ ನೀಡಿರುವುದು ಇದೇ ಪ್ರಥಮ ಬಾರಿ. ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಮಾಡಿದಾಗ ಮಾತ್ರ ಬೆಂಗಳೂರಿನ ನಾಗರಿಕರಿಗೆ ಪರಿಹಾರ ನೀಡಿದಂತಾಗುತ್ತದೆ ಎಂಬ ನಿಲುವಿನಿಂದ ಅಮೃತನಗರೋತ್ಥಾನ ಯೋಜನೆಯಡಿಯಲ್ಲಿ ಮೂರು ಸಾವಿರ ಕೋಟಿ ರೂ.ಗಳ ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಒದಗಿಸಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಹೊರಗಿನಿಂದ ಬರುವ ವಾಹನಗಳನ್ನು ನಿಯಂತ್ರಿಸಿ ಇಲ್ಲಿ ಹೆಚ್ಚು ದಕ್ಷತೆಯಿಂದ ಸಂಚಾರ ಪೋಲಿಸರನ್ನು ನಿಯೋಜಿಸಿ, ವಾಹನ ದಟ್ಟಣೆಯನ್ನು ಕಡಿಮೆ ಮಾಡಲಾಗಿದೆ.
ಸಬ್ ಅರ್ಬನ್ ರೈಲಿಗೆ ಈಗಾಗಲೇ ನಮ್ಮ ಪ್ರಧಾನಿಗಳು ಲೋಕಾರ್ಪಣೆ ಮಾಡಿದ್ದು ಕಾಮಗಾರಿ ಪ್ರಾರಂಭವಾಗಿದೆ. ಸ್ಯಾಟೆಲೈಟ್ ರಿಂಗ್ ರೋಡ್ ಕಾಮಗಾರಿ ಪ್ರಗತಿಯಲ್ಲಿದೆ. ಪಿ .ಆರ್.ಆರ್ ಬಗ್ಗೆ ಆದಷ್ಟು ಬೇಗನೆ ತೀರ್ಮಾನ ಮಾಡಲಾಗುವುದು. ಮೆಟ್ರೊ 3ನೇ ಹಂತಕ್ಕೆ ಚಾಲನೆ ನೀಡಿದ್ದೇವೆ. ರಾಜಕಾಲುವೆಗಳ ಸಮಸ್ಯೆಗೆ 2 ಸಾವಿರ ಕೊಟಿ ರೂ.ಗಳನ್ನು ಒದಗಿಸಿದೆ. ಅಡೆತಡೆಗಳನ್ನು ತೆರವುಗೊಳಿಸಿ ಸಮಸ್ಯೆಗೆ ಪರಿಹಾರ ನೀಡುತ್ತಿದ್ದೇವೆ. ಸರ್ಕಾರ ಬೆಂಗಳೂರಿನ ಅಭಿವೃದ್ದಿಗೆ ಅನುದಾನ ಒದಗಿಸಿದೆ. ಪ್ರಮುಖ ಕೆರೆಗಳಿಗೆ ಗೇಟ್ ಅಳವಡಿಸಿ ನೀರಿನ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ವರ್ಷ 11 ಮೇಲ್ಸೇತುವೆಗಳನ್ನು ನಿಗದಿತ ಸಮಯದೊಳಗೆ ಪೂರ್ಣ ಗೊಳಿಸಲು ಸೂಚಿಸಿದರು.
ನಮ್ಮದು ಸ್ಪಂದನಾಶೀಲ ಸರ್ಕಾರ. ಬೆಂಗಳೂರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ನಮ್ಮ ಸಚಿವರು ಅವರವರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಅಭಿವೃದ್ದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಬ್ರಾಂಡ್ ಉಳಿಸುವ ನಿಟ್ಟಿನಲ್ಲಿ ನಮ್ಮ ಕೆಲಸ ನಡೆದಿದೆ ಎಂದರು.
ಸಚಿವರಾದ ಬಿ.ಎ. ಬಸವರಾಜ, ಮುರುಗೇಶ್ ನಿರಾಣಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಗಾರರಾದ ರಾಕೇಶ್ ಸಿಂಗ್, ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಡಾ: ಕೆ.ವಿ.ತ್ರಿಲೋಕ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw