ಬೆಕ್ಕನ್ನು ರಕ್ಷಿಸಲು ಬಾವಿಗೆ ಹಾರಿದ ಐವರ ದಾರುಣ ಸಾವು!

ಪಾಳುಬಿದ್ದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಐವರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದ್ದು, ಬೆಕ್ಕನ್ನು ರಕ್ಷಿಸಲು ಒಬ್ಬರಾದ ಬಳಿಕ ಒಬ್ಬರು ಬಾವಿಗೆ ಹಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಳುಬಿದ್ದ ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿದ್ದು, ಬಹಳ ದಿನಗಳಿಂದಲೂ ಈ ಬಾವಿಯನ್ನು ಮುಚ್ಚಲಾಗಿತ್ತು. ಆದರೆ ಅದರಲ್ಲೇ ಕಸ ಸುರಿಯಲಾಗುತ್ತಿತ್ತು. ಜೈವಿಕ ಅನಿಲದಿಂದ ಉತ್ಪತ್ತಿಯಾಗಿದ್ದ ವಿಷಾನಿಲ ಸೋಕಿ ಬಾವಿಗೆ ಹಾರಿದ್ದವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಬಾವಿಗೆ ಒಟ್ಟು 6 ಮಂದಿ ಹಾರಿದ್ದರು. ಓರ್ವ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದ. ಆತನನ್ನು ರಕ್ಷಿಸಲಾಗಿದೆ. ಅಹ್ಮದ್ ನಗರದ ವಾಡ್ಕಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಬೆಕ್ಕಿನ ಪ್ರಾಣ ಉಳಿಸಲು ಮುಂದಾಗಿ ಐದು ಜನರ ಪ್ರಾಣ ಹೋಗಿರುವುದು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದೆ.
ಇನ್ನೂ ಪಾಳು ಬಾವಿಯನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಸಿರುವುದರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth