ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು ಇನ್ನಿಲ್ಲ
ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು(87 ವರ್ಷ) ಇಂದು ಮುಂಜಾನೆ 12:20ಕ್ಕೆ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಡಿ.ಬಿ. ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ಮಧ್ಯಾಹ್ನ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.
ಮಾಹಿತಿಗಾಗಿ ಡಿ.ಬಿ.ಚಂದ್ರೇಗೌಡರ ಅಣ್ಣನ ಮಗ ಡಿ.ಬಿ. ಜಯಪ್ರಕಾಶ್ ದಾರದಹಳ್ಳಿ ಮೊ :9448004945 ಸಂಪರ್ಕಿಸಬಹುದು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಂತಾಪ:
ಮಾಜಿ ಸಚಿವ, ಮಾಜಿ ಸಂಸದ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಡಿ.ಬಿ. ಚಂದ್ರೇಗೌಡರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಆಪ್ತವಲಯದಲ್ಲಿ ಡಿಬಿಸಿ ಎಂದೇ ಪ್ರಸಿದ್ದರಾಗಿದ್ದ ಡಿ.ಬಿ. ಚಂದ್ರೇಗೌಡರನ್ನು ಕಳೆದು ಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಅವರ ನಿಧನದಿಂದ ಮಲೆನಾಡಿನ ಭಾಗದಿಂದ ಬಂದಂತಹ ಸಮಾಜವಾದದ ಗಟ್ಟಿಕೊಂಡಿ, ನಿರ್ಮಲ ಮನಸ್ಸಿನ ವ್ಯಕ್ತಿತ್ವವೊಂದು ಕಳಚಿಬಿದ್ದಂತಾಗಿದೆ.
ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾ ಗಾಂಧಿ ಅವರು ಸಂಕಷ್ಟದಲ್ಲಿದ್ದ ವೇಳೆ 1978 ರಲ್ಲಿ ಚಂದ್ರೆಗೌಡರು ತಮ್ಮ ಸಂಸತ್ ಸದಸ್ಯ ಸ್ಥಾನವನ್ನು ಬಿಟ್ಟುಕೊಟ್ಟು, ಇಂದಿರಾಗಾಂಧಿ ಅವರ ಗೆಲುವಿಗೆ ಹಗಲು- ರಾತ್ರಿ ದುಡಿದು ಇಡೀ ದೇಶದ ಗಮನ ಸೆಳೆದಿದ್ದರು.
ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿ, ವಿಧಾನಸಭೆಯ ಸ್ಪೀಕರ್ ಆಗಿ, ರಾಜ್ಯಸಭೆಯ ಸದಸ್ಯರಾಗಿದ್ದರು. ವಿಧಾನ ಮಂಡಲ ಹಾಗೂ ಸಂಸತ್ತಿನ ಎಲ್ಲ ನಾಲ್ಕೂ ಸದನಗಳ ಸದಸ್ಯರಾಗಿದ್ದ ಹೆಗ್ಗಳಿಕೆ ಇವರದು.
ಸುಮಾರು ಐದು ದಶಕಗಳ ಕಾಲ ಈ ರಾಜ್ಯಕ್ಕೆ ತಮ್ಮ ಸಮಾಜವಾದಿ ಚಿಂತನೆಗಳ ಮೂಲಕ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದವರು ಚಂದ್ರೇಗೌಡರು ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.
ಚಂದ್ರೇಗೌಡರ ಆಡಳಿತ ವೈಖರಿಯನ್ನು ಹತ್ತಿರದಿಂದ ನೋಡಿದ ಸೌಭಾಗ್ಯ ನನ್ನದು. ವಿಧಾನಸಭೆ, ಪರಿಷತ್‌ಗಳಲ್ಲಿ ಅವರ ಆಳವಾದ, ವಿದ್ವತ್ ಪೂರ್ಣವಾದ ವಿಚಾರ ಮಂಡನೆ ಎಲ್ಲರನ್ನೂ ಸೆಳೆಯುತ್ತಿತ್ತು. ಆಡಳಿತ ಪರಿಶುದ್ದತೆ, ವೈಚಾರಿಕ, ಜನಪರ ಚಿಂತನೆಗಳಿಗೆ ಹೆಸರಾಗಿದ್ದ ಅವರು ಕಿರಿಯ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಶಿವಕುಮಾರ್ ಅವರು ಕೊಂಡಾಡಿದ್ದಾರೆ.
“ಶರಣರ ಗುಣವನ್ನು ಮರಣದ ಲ್ಲಿ ಕಾಣು ಎಂಬಂತೆ, ಚಂದ್ರೇಗೌಡರು ಕನ್ನಡ, ಕರ್ನಾಟಕ ಅಭಿವೃದ್ಧಿಗೆ ದಾರಿ ಹಾಕಿಕೊಟ್ಟು ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬದವರು, ಬಂದುಗಳು, ಅಭಿಮಾನಿಗಳಿಗೆ ಅವರ ಸಾವಿನ ನೋವು ಅರಗಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ.” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಜಮೀರ್ ಅಹಮದ್ ಖಾನ್ ಸಂತಾಪ:
ಹಿರಿಯ ರಾಜಕಾರಣಿ, ಉತ್ತಮ ಸಂಸದೀಯ ಪಟು ಆಗಿದ್ದ ಡಿ. ಬಿ. ಚಂದ್ರೇಗೌಡರು ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ದುಃಖವಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆ ಹೀಗೆ
ನಾಲ್ಕೂ ಸದನಗಳ ಸದಸ್ಯರಾಗಿದ್ದ ಅವರು ಅನೇಕ ಹೊಣೆಗಾರಿಕೆ ನಿಭಾಯಿಸಿದ್ದರು.
ದೇಶದ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಚಿಕ್ಕ ಮಗಳೂರು ಲೋಕಸಭೆ ಚುನಾವಣೆಯಲ್ಲಿ
ಶ್ರೀಮತಿ ಇಂದಿರಾ ಗಾಂಧಿ ಅವರಿಗಾಗಿ ಸಂಸತ್ ಸದಸ್ಯತ್ವ ಕ್ಕೆ ರಾಜೀನಾಮೆ ನೀಡಿ ಬಿಟ್ಟುಕೊಟ್ಟಿದ್ದರು. ಕಿರಿಯ ರಾಜಕಾರಣಿಗಳಿಗೆ ಸದಾ ಮಾದರಿ ಆಗಿದ್ದರು. ಡಿ.ಬಿ. ಚಂದ್ರೇಗೌಡರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಹೇಳಿದ್ದಾರೆ.
ಡಿ.ಬಿ.ಚಂದ್ರೇಗೌಡರ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ:
ಬೆಂಗಳೂರು: ರಾಜಕೀಯ ಮುತ್ಸದ್ಧಿ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಮುಖಂಡರಾದ ಅವರು, ಶಾಸಕರಾಗಿ, ಸಂಸದರಾಗಿ ಕಾರ್ಯ ನಿರ್ವಹಿಸಿದವರು. ರಾಜಕೀಯ ಕ್ಷೇತ್ರದಲ್ಲಿ ಮಾದರಿ ವ್ಯಕ್ತಿತ್ವ ಅವರದು ಎಂದು ತಿಳಿಸಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರು, ಅಭಿಮಾನಿಗಳಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಸಂತಾಪ
ಕರ್ನಾಟಕದ ಶ್ರೇಷ್ಠ ಸಂಸದೀಯಪಟುಗಳಲ್ಲಿ ಒಬ್ಬರು, ಹಿರಿಯ ರಾಜಕಾರಣಿ, ಮಾಜಿ ಸಚಿವರು ಹಾಗೂ ಜನತಾ ಪರಿವಾರದ ಕೊಂಡಿ ಆಗಿದ್ದ ಡಿ.ಬಿ.ಚಂದ್ರೇಗೌಡರು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ:
ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಿ.ಬಿ.ಚಂದ್ರೇಗೌಡ ಅವರ ನಿಧನದ ಸುದ್ದಿ ತಿಳಿದು ಅತೀವವಾದ ದುಃಖವಾಯಿತು.
ಡಿ.ಬಿ.ಚಂದ್ರೇಗೌಡ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಸಾರ್ಥಕವಾಗಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಅಗಲಿಕೆಯಿಂದ ನಮ್ಮ ರಾಜ್ಯವು ಒಬ್ಬ ಹಿರಿಯ, ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿ ಬಳಗದವರಿಗೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.