ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ: ಇಲ್ಲಿದೆ ಮಾಹಿತಿ
ಬೆಂಗಳೂರು: ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿಗಳು ಆಗಿರುವ ಹೆಚ್.ಡಿ.ದೇವೇಗೌಡರು ಭಾಗಿಯಾಗುವುದಕ್ಕೆ ಗುರುವಾರ ನಗರದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದ ಸಹಮತ ವ್ಯಕ್ತಪಡಿಸಲಾಯಿತು.
ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ದೇಶದ ಹಲವಾರು ರಾಜಕೀಯ ಪಕ್ಷಗಳು ಬಹಿಷ್ಕಾರ ಹಾಕಿರುವ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಕಾರ್ಯಕಾರಿಣಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದಿಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಹಾಲಿ ಪ್ರಧಾನಿಗಳು ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಜರಾಗುವುದು ತಪ್ಪೇನಲ್ಲ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಾನ ಅಂತರ ಕಾಯ್ದುಕೊಳ್ಳಲಾಗುವುದು ಹಾಗೂ ಪಕ್ಷದ ಸೈದ್ಧಾಂತಿಕ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕಾರ್ಯಕಾರಿಣಿ ಸ್ಪಷ್ಟಪಡಿಸಿದೆ ಎಂದು ಅವರು ಮಾಹಿತಿ ನೀಡಿದರು.
ಹಾಗೆಯೇ, ಸಂಸತ್ ಭವನ ಉದ್ಘಾಟನೆ, ಅದರ ಸುತ್ತಮುತ್ತ ನಡೆಯುವ ಬೆಳವಣಿಗೆಗಳ ಕುರಿತು ಹಾಗೂ ತಾವು ಭಾಗಿಯಾಗುವ ವಿಷಯದಲ್ಲಿ ಮಾಜಿ ಪ್ರಧಾನಿಗಳು ಕಾರ್ಯಕಾರಿಣಿಯಲ್ಲಿ ಸಮಾಲೋಚನೆ ನಡೆಸಿದರು ಎಂಬುದಾಗಿ ಅವರು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಗೂ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯಕಾರಿಣಿ ಸಮಾಲೋಚನೆ ನಡೆಸಿತು. ಹಾಗೆಯೇ, ಪಕ್ಷದ ಸದಸ್ಯ ತ್ವ ನೊಂದಣಿ ವಿಚಾರದಲ್ಲಿ, ಕೇರಳ ನಾಯಕರು ಹೆಚ್ಚು ಆದ್ಯತೆ ಕೊಡಬೇಕು ಎಂದು ಸಲಹೆ ಮಾಡಿದರು. ಅದಕ್ಕೂ ಕಾರ್ಯಕಾರಿಣಿ ಒಪ್ಪಿಗೆಯ ಮುದ್ರೆ ಒತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ರೈತರ ಪರವಾಗಿ ಮಾಜಿ ಪ್ರಧಾನಿಗಳ ಹೋರಾಟ:
ದೇಶದ ಉದ್ದಗಲಕ್ಕೂ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸೂಕ್ತ ಬೆಲೆ, ಸಬ್ಸಿಡಿ, ರಸಗೊಬ್ಬರ ಸಮಸ್ಯೆ, ಇತ್ಯಾದಿ ಸೌಲಭ್ಯ ಸಿಗದೆ ಕಂಗಾಲಾಗಿದ್ದಾರೆ. ಹೀಗಾಗಿ ದೇಶಾದ್ಯಂತ ರೈತರ ಪರವಾಗಿ ಬೃಹತ್ ಹೋರಾಟವನ್ನು ದೇವೇಗೌಡರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ರೂಪಿಸಬೇಕು ಎಂದು ಕೇರಳದ ಜೆಡಿಎಸ್ ಪಕ್ಷದ ಹಿರಿಯ ಶಾಸಕರು ಹಾಗೂ ಸಚಿವರೂ ಆಗಿರುವ ಕೃಷ್ಣನ್ ಕುಟ್ಟಿ ಅವರು ನಿರ್ಣಯ ಮಂಡಿಸಿದರು. ಈ ನಿರ್ಣಯಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸರ್ವಾನುಮತದ ಒಪ್ಪಿಗೆ ನೀಡಿತು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕೇರಳ, ತೆಲಂಗಾಣ, ತಮಿಳುನಾಡು, ಆಂದ್ರ ಪ್ರದೇಶದ ನಾಯಕರು; ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆ ಆಗಿರುವುದರಿಂದ ಕುಮಾರಸ್ವಾಮಿ ಅವರು ಎದೆಗುಂದಬಾರದು ಎಂದು ನನಗೆ ಧೈರ್ಯ ಹೇಳಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಸದಾ ನನ್ನ ಜತೆ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ, ಪಕ್ಷದ ಸಂಘಟನೆ ಹಾಗೂ ಮಹತ್ವದ ರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ದೇಶದ ಬೆಳವಣಿಗೆಗಳ ಬಗ್ಗೆ ಹಾಗೂ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಎರಡು ತಿಂಗಳಿಗೆ ಒಮ್ಮೆ ಕರೆಯುವಂತೆ ನಮ್ಮ ಪಕ್ಷದ ಕೇರಳ ರಾಜ್ಯದ ಹಿರಿಯ ನಾಯಕರಾದ ಡಾ. ನೀಲ ಲೋಹಿದಾಸ್ ನಾಡಾರ್ ಅವರು ಸಲಹೆ ಮಾಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ಕೈಕೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕಾರ್ಯಕಾರಿಣಿಯಲ್ಲಿ ಕೇರಳದ ಸಚಿವರೂ, ಪಕ್ಷದ ಹಿರಿಯ ನಾಯಕರಾದ ಕೃಷ್ಣನ್ ಕುಟ್ಟಿ, ಕೇರಳ ರಾಜ್ಯಾಧ್ಯಕ್ಷ ಹಾಗೂ ಶಾಸಕ ಮ್ಯಾಥ್ಯೂ ಥಾಮಸ್, ತಮಿಳುನಾಡು ರಾಜ್ಯಾಧ್ಯಕ್ಷ ಪೊನ್ನುಸ್ವಾಮಿ ಸೇರಿದಂತೆ ಆಂಧ್ರ, ಒರಿಸ್ಸಾ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಉತ್ತರಾಖಂಡ ಮುಂತಾದ ರಾಜ್ಯಗಳ ಪ್ರತಿನಿಧಿಗಳು ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕರ್ನಾಟಕ, ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಪ್ರತಿನಿಧಿಗಳು, ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ಜೆಡಿಎಸ್ ನಗರ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಬಾಗಲಕೋಟೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾವಿನಮರದ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw