ಉದ್ಯೋಗ ನೀಡುವ ಭರವಸೆ ನೀಡಿ ಜಮೀನು ಸ್ವಾಧೀನ ಮಾಡಿಕೊಂಡು ಕಂಪೆನಿಯಿಂದ ವಂಚನೆ: ಯುವಕ ಸಾವಿಗೆ ಶರಣು
ಮೈಸೂರು: ಉದ್ಯೋಗ ನೀಡುವ ಭರವಸೆ ನೀಡಿ ಜಮೀನು ಪಡೆದುಕೊಂಡ ಕಂಪೆನಿಯೊಂದು ನಾಲ್ಕು ವರ್ಷಗಳು ಕಳೆದರೂ ಉದ್ಯೋಗ ನೀಡದೇ ವಂಚಿಸಿದ ಕಾರಣ ಮನನೊಂದ ಯುವಕನೋರ್ವ ಸಾವಿಗೆ ಶರಣಾದ ದಾರುಣ ಘಟನೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಬಳಿ ನಡೆದಿದೆ.
ಸಿದ್ದರಾಜು(28) ಸಾವಿಗೆ ಶರಣಾದ ಯುವಕನಾಗಿದ್ದಾನೆ. ಸಾವಿಗೂ ಮುನ್ನ ಪಾರ್ಲೆ ಆಗ್ರೋ ಕಂಪೆನಿ ವಿರುದ್ಧ ಸಿದ್ದರಾಜು ಡೆತ್ ನೋಟ್ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿ ಶಾಖೆ ಮುಖ್ಯಸ್ಥ ರಾಮಪ್ರಸಾದ್ ಹಾಗೂ ಹೆಚ್.ಎಸ್.ಮುಷೀದ್ ಉಲ್ಲಾಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕೆಐಎಡಿಬಿ ಕಚೇರಿಯು ಸಿದ್ದರಾಜು ತಂದೆ ಸಿದ್ದೇಗೌಡ ಅವರ ಜಮೀನನ್ನು ಮಗನಿಗೆ ಉದ್ಯೋಗ ಕೊಡುವ ಭರವಸೆಯೊಂದಿಗೆ ಸ್ವಾಧೀನ ಪಡಿಸಿಕೊಂಡಿತ್ತು. ಆ ಜಾಗದಲ್ಲಿ ಆಗ್ರೋ ಕಂಪೆನಿ ನಿರ್ಮಾಣ ಮಾಡಿತ್ತು.
ಕಂಪೆನಿಯ ಭರವಸೆಯಂತೆ ಕಳೆದ ನಾಲ್ಕು ವರ್ಷಗಳಿಂದ ಸಿದ್ದರಾಜು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದು, ಅವರಿಗೆ ಉದ್ಯೋಗ ನೀಡಲು ನಿರಾಕರಿಸಲಾಗಿದೆ. ಇದರಿಂದ ನೊಂಡು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸಿದ್ದರಾಜು ನೇಣಿಗೆ ಶರಣಾಗಿದ್ದಾರೆ.
ಡೆತ್ ನೋಟ್ ನಲ್ಲಿ ರೈತರ ಸಾವಿಗೆ ಕಾರಣವಾಗಿರುವ ಕಂಪೆನಿ ವಿರುದ್ಧ ಕ್ರಮಕ್ಕೆ ಸಿದ್ದರಾಜು ಒತ್ತಾಯಿಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.