ಬಿಗ್ ಅನೌನ್ಸ್: ಜಿ 20 ಶೃಂಗಸಭೆ ಮುಗಿದ ಬೆನ್ನಲ್ಲೇ ಹಸಿರು ಪರಿಸರ ನಿಧಿಗೆ 2 ಬಿಲಿಯನ್ ಡಾಲರ್ ಕೊಡುಗೆ ಘೋಷಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್
ಜಾಗತಿಕ ಮಾಲಿನ್ಯ ನಿಯಂತ್ರಣ ಮತ್ತು ಹವಾಮಾನ ಬದಲಾವಣೆ ಪರಿಣಾಮಕ್ಕೀಡಾಗಿರುವ ಸಮುದಾಯಗಳ ನೆರವಿಗಾಗಿ ಹಸಿರು ಪರಿಸರ ನಿಧಿಗೆ ಎರಡು ಬಿಲಿಯನ್ ಡಾಲರ್ ಕೊಡುಗೆ ನೀಡುವುದಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಘೋಷಿಸಿದ್ದಾರೆ.
ಅಭಿವೃದ್ಧಿ ಶೀಲ ರಾಷ್ಟ್ರಗಳ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಹಸಿರು ಪರಿಸರ ನಿಧಿ ಅತಿದೊಡ್ಡ ಜಾಗತಿಕ ನಿಧಿಯಾಗಿದೆ.
ಜಿ-20 (G20) ಶೃಂಗಸಭೆಯ ವೇಳೆ ಈ ನೆರವು ಘೋಷಿಸಲಾಗಿದ್ದು, ಭಾರತ ಬ್ರಿಟನ್ ಹೈಕಮಿಷನ್ ಅಧಿಕಾರಿಗಳು ಈ ನೆರವನ್ನು ಖಚಿತಪಡಿಸಿದ್ದಾರೆ. 194 ರಾಷ್ಟ್ರಗಳು ಹಸಿರು ಪರಿಸರ ನಿಧಿಯಿಂದ ನೆರವು ಪಡೆಯಲಿದೆ.
ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿರುವ ಅತಿ ದುರ್ಬಲ ವರ್ಗದ ಬೆಂಬಲಕ್ಕೆ ಈ ನಿಧಿ ಬಳಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ ನಲ್ಲಿ ನಡೆಯಲಿರುವ ಸಿಒಪಿ 28 ಶೃಂಗಸಭೆಯಲ್ಲಿ ಭಾಗವಹಿಸಲು ಜಾಗತಿಕ ನಾಯಕರನ್ನು ರಿಷಿ ಸುನಾಕ್ ಆಹ್ವಾನಿಸಿದ್ದು, ಪ್ರತಿದೇಶಗಳ ಇಂಗಾಲ ಉತ್ಪಾದನೆಯನ್ನು ಕಡಿಮೆಗೊಳಿಸುವುದು ಹಾಗೂ ಆಯಾ ದೇಶಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿರುವವರ ನೆರವಿಗೆ ಧಾವಿಸುವುದರ ಬಗ್ಗೆ ಒಟ್ಟಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
ಜಿ-20 ಶೃಂಗಸಭೆಯಿಂದ ಈ ರೀತಿಯ ನಿರ್ಧಾರಗಳು ಹೊರಬರುವುದನ್ನೂ ಇಡೀ ವಿಶ್ವವೇ ನಿರೀಕ್ಷಿಸುತ್ತಿದೆ. ನಮ್ಮ ಸರ್ಕಾರವು ಈ ರೀತಿಯ ನಾಯಕತ್ವ ವಹಿಸುವುದನ್ನು ಮುಂದುವರೆಸಲಿದ್ದು, ವಿಶ್ವವನ್ನು ಮತ್ತಷ್ಟು ಸಮೃದ್ಧ ಹಾಗೂ ಸುರಕ್ಷಿತವಾಗಿಸಲು ಯುಕೆ ಪ್ರಯತ್ನಿಸಲಿದೆ ಎಂದು ರಿಷಿ ಸುನಾಕ್ ಪ್ರತಿಕ್ರಿಯೆ ನೀಡಿದ್ದಾರೆ.