ಗಾಳಿಪಟದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನಿಗೆ ಗಂಭೀರ ಗಾಯ
24/06/2021
ಬೆಂಗಳೂರು: ಗಾಳಿಪಟದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ ಬಳಿಯಲ್ಲಿ ನಡೆದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿಕೊಂಡಿದೆ. ಈ ವೇಳೆ ದಾರವನ್ನು ಬಿಡಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಬೆರಳು ತುಂಡಾಗಿದ್ದು, ಕುತ್ತಿಗೆಗೆ ಗಂಭೀರವಾದ ಗಾಯವಾಗಿದೆ ಎಂದು ವರದಿಯಾಗಿದೆ.
ಬೈಕ್ ಸವಾರನ ಸಂಕಷ್ಟವನ್ನು ನೋಡಿದ ಸ್ಥಳೀಯರು, ಆತನ ನೆರವಿಗೆ ಮುಂದಾಗಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯಾರೋ ಮನೆಯ ಟೆರೆಸ್ ನಿಂದ ಹಾರಿ ಬಿಟ್ಟಿದ್ದ ಗಾಳಿಪಟ ದಾರ ತುಂಡಾಗಿ ರಸ್ತೆಯೆಡೆಗೆ ನುಗ್ಗಿದೆ. ಇದರಿಂದಾಗಿ ಬೈಕ್ ಸವಾರ ಅಪಾಯಕ್ಕೆ ಸಿಲುಕಿದ್ದು, ಸದ್ಯ ಈ ಭಾಗದಲ್ಲಿ ಗಾಳಿಪಟ ಹಾರಿಸದಂತೆ ಗಮನ ಹರಿಸಬೇಕು ಎಂದು ಬೈಕ್ ಸವಾರ ಕೂಡ ಮನವಿ ಮಾಡಿಕೊಂಡಿದ್ದಾರೆ.