“ಗಂಡ-ಅತ್ತೆ ಹಿಂಸೆ ನೀಡುತ್ತಿದ್ದಾರೆ” ಎಂದು ದೂರಿದ ಮಹಿಳೆಗೆ “ಅನುಭವಿಸು” ಎಂದ ಮಹಿಳಾ ಆಯೋಗದ ಅಧ್ಯಕ್ಷೆ
ಕೊಚ್ಚಿ: ಕೌಟುಂಬಿಕ ಹಿಂಸೆಗೊಳಗಾಗಿರುವ ಮಹಿಳೆಯಿಂದ ದೂರು ಆಲಿಸುತ್ತಿರುವ ವೇಳೆ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ಅವರು ಒರಟಾಗಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಜೋಸೆಫೀನ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದ ಖಾಸಗಿ ಸುದ್ದಿವಾಹಿನಿಯಲ್ಲಿ ಕೌಟುಂಬಿಕ ಸಮಸ್ಯೆಗಳ ಬಗ್ಗೆ ದೂರು ಆಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೋಸೆಫೀನ್ ಮಹಿಳೆಯೋರ್ವರಿಂದ ದೂರು ಆಲಿಸುತ್ತಿದ್ದರು. ಎರ್ನಾಕುಲಂ ಜಿಲ್ಲೆಯಿಂದ ಕರೆ ಮಾಡಿದ್ದ ಮಹಿಳೆ, ನನಗೆ ಪತಿ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ದೂರು ಹೇಳುತ್ತಿರುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಲೋ ಏನೋ ಮಹಿಳೆಗೆ ಸರಿಯಾಗಿ ಕೇಳಿಸಿರಲಿಲ್ಲ. ಜೋಸೆಫೀನ್ ಅವರು, ನಿಮಗೆ ಮಕ್ಕಳಿದ್ದಾರಾ? ಎಂದು ಪ್ರಶ್ನಿಸಿದರು, ಆ ಕಡೆಯಿಂದ ಉತ್ತರ ಕೇಳಲಿಲ್ಲ. ಅವರು ಅದೇ ಪ್ರಶ್ನೆಯನ್ನು ರಿಪೀಟ್ ಮಾಡಿದರು. ಆಗಲೂ ಉತ್ತರ ಬಾರದೇ ಇದ್ದಾಗ ಅವರಿಗೆ ಕೋಪ ಬಂದಿತ್ತು. ಆ ಬಳಿಕ ಆ ಕಡೆಯಿಂದ ಮಹಿಳೆ ಹೌದು ಇದ್ದಾರೆ ಎಂದು ಉತ್ತರಿಸಿದ್ದಾರೆ. ಆ ಬಳಿಕ ಜೋಸೆಫೀನ್ ಅವರು ಆಕ್ರೋಶಕ್ಕೀಡಾಗಿದ್ದರು.
ಮುಂದುವರಿದು, ನೀನು ಯಾಕೆ ಪೊಲೀಸರಿಗೆ ದೂರು ನೀಡಿಲ್ಲ? ಎಂದು ಅವರು ಪ್ರಶ್ನಿಸಿದರು. ಈ ವೇಳೆ ಮಹಿಳೆಯು, “ಅವರು ಯಾರಿಗೂ ಹೇಳಲಿಲ್ಲ” ಎಂದು ಉತ್ತರಿಸಿದ್ದಾರೆ. ಈ ವೇಳೆ ಅಸಮಾಧಾನಕ್ಕೀಡಾದ ಅವರು “ಎನ್ನಾ ಪಿನ್ನೆ ಅನುಭವಿಚ್ಚೋ(ಮತ್ತೇನು ಅನುಭವಿಸು) ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.