ಗಂಡನಿಗೆ ಶೀಲದ ಮೇಲೆ ಅನುಮಾನ! ಹೆತ್ತವರಿಗೆ ಮರ್ಯಾದೆ ಪ್ರಶ್ನೆ | ನೊಂದವಳು ಕೊನೆಗೆ ಮಾಡಿದ್ದೇನು ಗೊತ್ತಾ?
ಮೈಸೂರು: ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸುವ ಸಂದರ್ಭದಲ್ಲಿ ಆತನ ಉದ್ಯೋಗ ಏನು? ಆತನ ಜಾತಿ ಏನು ಎಂದೇ ನೋಡುತ್ತಾರೆಯೇ ವಿನಃ ಆತನ ಸ್ವಭಾವ ಏನೆಂದು ನೋಡುವುದೂ ಇಲ್ಲ, ವಿಚಾರಿಸುವುದೂ ಇಲ್ಲ. ಊರಿನವರ ಎದುರಲ್ಲಿ ತಮ್ಮ ಮರ್ಯಾದೆ ಉಳಿಯಬೇಕು. ಊರಿನವರು ನಮ್ಮನ್ನು ನೋಡಿ ಹೊಗಳಬೇಕು ಎಂದಷ್ಟೇ ಯೋಚಿಸುತ್ತಾರೆ. ತಮ್ಮ ಮಗಳು ಮದುವೆಯ ನಂತರ ಗಂಡನಿಂದ ಹಿಂಸೆಪಟ್ಟು ತವರು ಮನೆಗೆ ಬಂದಾಗ ಮಗಳಿಗೇ ನೂರಾರು ಬುದ್ಧಿ ಹೇಳಿ ಮತ್ತೆ ಗಂಡನ ಮನೆಗೆ ಕಳುಹಿಸುತ್ತಾರೆ. ಇಂತಹ ಘಟನೆ ಮೈಸೂರಿನ ಕೆ.ಆರ್.ನಗರದ ಯುವತಿಯೋರ್ವಳ ಜೀವನದಲ್ಲಿ ನಡೆದಿದ್ದು, ಆಕೆಯ ಜೀವನ ದುರಂತ ಅಂತ್ಯ ಕಂಡಿದೆ.
ಕೆ.ಆರ್.ನವರದ ಬಿಂದುಶ್ರೀಯನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಂದ್ರಶೇಖರ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಮದುವೆಯ ಬಳಿಕ ಚಂದ್ರಶೇಖರ್ ಗೆ ತನ್ನ ಪತ್ನಿಯ ನಡತೆಯ ಮೇಲೆ ವಿಪರೀತವಾಗಿ ಸಂಶಯವಿತ್ತು. ಇದೇ ಕಾರಣಕ್ಕಾಗಿ ಆತ ದಿನ ನಿತ್ಯ ಪತ್ನಿಯನ್ನು ಹಿಂಸಿಸುತ್ತಿದ್ದ.
ಈತನ ಹಿಂಸೆ ತಾಳಲಾರದೇ ಬಿಂದುಶ್ರೀ ತನ್ನ ತವರು ಮನೆ ಸೇರಿದ್ದಳು. ಇದಾದ ಬಳಿಕ ತವರು ಮನೆಗೆ ಬಂದ ಚಂದ್ರಶೇಖರ್, ನಿಮ್ಮ ಮಗಳನ್ನು ಕಳುಹಿಸಿ ನಾನು ಚೆನ್ನಾಗಿ ಸಂಸಾರ ಮಾಡುತ್ತೇನೆ ಎಂದು ಹೇಳಿದ್ದಾನೆ. ಈತ ಹೇಳಿದ ತಕ್ಷಣವೇ ಕುಟುಂಬಸ್ಥರು, ಆತ ಬದಲಾಗಿದ್ದಾನೆ. ಗಂಡ-ಹೆಂಡತಿ ಯಾವಾಗಲೂ ಒಟ್ಟಿಗೆ ಇರಬೇಕು ಎಂಬೆಲ್ಲ ತಮ್ಮ ಬಿಟ್ಟಿ ಉಪದೇಶಗಳನ್ನು ಹೇಳಿ ಗಂಡನ ಜೊತೆಗೆ ಕಳುಹಿಸಿ ಕೊಟ್ಟಿದ್ದಾರೆ.
ಗಂಡನ ಮನೆಗೆ ಬಂದ ಬಳಿಕ ಚಂದ್ರಶೇಖರ್ ತನ್ನ ಅದೇ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾನೆ. ಪತ್ನಿಗೆ ದಿನನಿತ್ಯ ನರಕ ತೋರಿಸಲು ಆರಂಭಿಸಿದ್ದಾನೆ. ಇದರಿಂದ ರೋಸಿಹೋದ ಬಿಂದುಶ್ರೀ ತನ್ನ ತವರು ಮನೆಗೆ ಮತ್ತೆ ಬಂದಿದ್ದು, ಡೆತ್ ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್ ನೋಟ್ ನಲ್ಲಿ ಹೀಗೆ ಬರೆದಿರುವ ಬಿಂದುಶ್ರೀ, “ನೀವು ಅಂದುಕೊಂಡಷ್ಟು ನಿಮ್ಮ ಅಳಿಯ ಒಳ್ಳೆಯವನಲ್ಲ, ಅವನ ಹಿಂಸೆ ಸಹಿಸಿಕೊಂಡು ನಿತ್ಯ ಸಾಯುವ ಬದಲು ಒಂದೇ ಬಾರಿಗೆ ನಾನು ಸತ್ತು ಹೋಗುತ್ತೇನೆ. ತವರು ಮನೆಗೆ ಮಗಳು ಸೇರಿದರೆ ನಿಮ್ಮ ಮರ್ಯಾದೆಯೂ ಕಡಿಮೆಯಾಗುತ್ತದೆ ಎಂದು ಮನೆಯವರ “ಮರ್ಯಾದೆ”ಯ ಪ್ರಶ್ನೆ ಎಂಬ ಮಾತುಗಳಿಗೂ ನೊಂದು ಉತ್ತರಿಸಿದ್ದಾಳೆ. ನನ್ನ ಮಕ್ಕಳನ್ನು ನೀವೇ ಸಾಕಿ, ಯಾರ ಬಳಿಗೂ ಕಳುಹಿಸಬೇಡಿ ಎಂದು ಕೊನೆಯದಾಗಿ ಹೇಳಿರುವ ಆಕೆ, ತನ್ನನ್ನು ಕ್ಷಮಿಸಿ ಎಂದು ಹೇಳಿದ್ದಾಳೆ.