ಹೆಣ್ಣು ಮಕ್ಕಳಿಗೆ ಅಲ್ಲ, ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯವಿದೆ
ನೀನು ಹೆಣ್ಣು, ಸಮಾಜದಲ್ಲಿ ತಗ್ಗಿಬಗ್ಗಿ ನಡೆಯಬೇಕು. ಸಂಸ್ಕಾರದಿಂದ ಬೆಳೆಯಬೇಕು ಎಂದೆಲ್ಲ ಹೆಣ್ಣಿಗೆ ಪಾಠ ಮಾಡುವುದರ ಬದಲು ಇನ್ನು ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸಲು ಪೋಷಕರು ಮುಂದಾಗಬೇಕು. ಗಂಡು ಮಕ್ಕಳು ಏನು ಮಾಡಿದರೂ ಸರಿ ಎನ್ನುವ ಭಾವನೆಗಳಿಂದಲೇ ಇಂದು ಸಮಾಜದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಗಂಡು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕಾರ ನೀಡಿ ಪೋಷಕರು ಬೆಳೆಸಿದರೆ, ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಧೈರ್ಯದಿಂದ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆಯಬಹುದು.
ನಾವು ಬಳಷ್ಟು ಅತ್ಯಾಚಾರ ಪ್ರಕರಣಗಳನ್ನು ದಿನನಿತ್ಯ ಕೇಳುತ್ತೇವೆ. ತಂದೆಯಿಂದ ಮಗಳ ರೇಪ್, ಅಜ್ಜನಿಂದ ಮೊಮ್ಮಗಳ ರೇಪ್ ಮೊದಲಾದ ವರ್ಣರಂಜಿತ ಟೈಟಲ್ ಗಳಿಂದ ನಮ್ಮ ಮಾಧ್ಯಮಗಳಲ್ಲಿ, ಅದರಲ್ಲೂ ಅಂತರ್ಜಾಲ ಪತ್ರಿಕೆಗಳಲ್ಲಿ ನಾವು ಕಾಣುತ್ತೇವೆ. ಆದರೆ, ಅಲ್ಲಿ ಹೆಣ್ಣಿನ ನೋವು ಯಾರಿಗೂ ಕಾಣಿಸುವುದಿಲ್ಲ. ಒಬ್ಬ ಗಂಡು ಒಂದು ಹೆಣ್ಣನ್ನು ಚುಡಾಯಿಸಿದರೆ, ಗಂಡಿಗೆ ಪಾಠ ಮಾಡಬೇಕಾದ ಸಮಾಜ, “ಅವಳು ಸರಿ ಇಲ್ಲ, ಅದಕ್ಕೆ ಅವನು ಹಾಗೆ ನಡೆದುಕೊಂಡ” ಎಂದು ವಾದಿಸುತ್ತಾರೆ. ಅಂದರೆ ಗಂಡಿಗೆ ಯಾವುದೇ ಸಂಸ್ಕಾರಗಳು ಬೇಕಾಗಿಲ್ಲವೇ?
ಮಹಿಳೆಯರ ಮೇಲೆ ಎಲ್ಲಿಯೇ ದೌರ್ಜನ್ಯ ನಡೆದರೆ, ಮೊದಲು ಹೇಳುವುದು, ಅವಳು ಸರಿ ಇದ್ದಿದ್ದರೆ, ಇದೆಲ್ಲ ನಡೆಯುತ್ತಿತ್ತಾ? ಎಂದು. ಹೆಣ್ಣು ಅವಳ ಮಿತಿಯಲ್ಲಿರಬೇಕು, ಗಂಡು ಏನೇ ಮಾಡಿದರೂ ಅದನ್ನು ಪ್ರಶ್ನಿಸಬಾರದು ಎನ್ನುವ ಮನಸ್ಥಿತಿ ಇಂದು ಸಮಾಜದಲ್ಲಿ ದಟ್ಟವಾಗಿ ಬೆಳೆದಿರುವುದಕ್ಕೆ ಕಾರಣ ಪುರುಷ ಪ್ರಧಾನ ಸಮಾಜವಾಗಿದೆ. ಇದರ ರೂವಾರಿ ಕೇವಲ ಗಂಡು ಮಾತ್ರವಲ್ಲ, ಹೆಣ್ಣೂ ಕೂಡ. ಎಲ್ಲಾ ಮನೆಗಳಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಸೇವೆ ಮಾಡಲು ಇರುವುದು ಎನ್ನುವ ಭಾವನೆಯನ್ನು ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರ ತಲೆಯಲ್ಲಿಯೂ ಪೋಷಕರೇ ಬಿತ್ತುತ್ತಾರೆ. ಅಮ್ಮ ತನ್ನ ಹೆಣ್ಣು ಮಗುವಿಗೆ ನೀನು ಅಣ್ಣನವರ ಬಟ್ಟೆ ಒಗೆದುಕೊಡು, ಅಣ್ಣ, ತಮ್ಮಂದಿರ ಊಟ ಮಾಡಿದ ತಟ್ಟೆ ತೊಳೆದುಕೊಡು, ಅಡುಗೆ ಮಾಡಿಕೊಡು ಎಂದು ಸಣ್ಣ ವಯಸ್ಸಿನಲ್ಲಿಯೇ ತನ್ನ ಹೆಣ್ಣು ಮಗಳಿಗೆ ಕಳಿಸುತ್ತಾಳೆ. ಇದು ಮುಂದೆ, ಹೆಣ್ಣು ಗಂಡಿನ ಸೇವೆ ಮಾಡುವುದು ಆಕೆಯ ಕರ್ತವ್ಯ ಎಂಬ ಭಾವನೆ ಗಂಡು ಮಕ್ಕಳ ಮನಸ್ಸಿನಲ್ಲಿ ಬರಲು ಕಾರಣವಾಗುತ್ತದೆ. ಪ್ರತಿಯೊಬ್ಬ ತಂದೆ ತನ್ನ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಸಮಾನವಾಗಿ ಯಾವಾಗ ಕಾಣುತ್ತಾನೋ ಅಂದು, ಆತನ ಹೆಣ್ಣು ಮಗಳು ಕೂಡ ಧೈರ್ಯದಿಂದ ಬದುಕಲು ಸಾಧ್ಯವಾಗುತ್ತದೆ.
ಬಹುತೇಕ ಮನೆಗಳಲ್ಲಿ ಗಂಡು ಮಕ್ಕಳು ರಾತ್ರಿ 10-12 ಗಂಟೆಗೆ ಮನೆಗೆ ಬಂದರೂ, ಪೋಷಕರು ಪ್ರಶ್ನಿಸುವುದಿಲ್ಲ. ಅವನು ಗಂಡು, ಹಾಗಾಗಿ ಹೋಗುತ್ತಾನೆ ಎಂದು ಹೇಳುತ್ತಾರೆ. ಅದೇ ಗಂಡು ರಾತ್ರಿ ಏನೇನು ಕೆಟ್ಟ ಕೆಲಸ ಮಾಡುತ್ತಾನೆ ಎಂದು ನೋಡುವುದಿಲ್ಲ. ಆತ ದುಶ್ಚಟಗಳನ್ನು ಕಲಿತು, ಸಮಾಜಕ್ಕೆ ಮುಂದೆ ಮಾರಕವಾಗುತ್ತಾನೆ. ಸ್ನೇಹಿತರ ಜೊತೆಗೆ ಸೇರಿಕೊಂಡು ದಾರಿಯಲ್ಲಿ ಹೋಗುವ ಹೆಣ್ಣು ಮಕ್ಕಳನ್ನು ಚುಡಾಯಿಸಲು ಆರಂಭಿಸುತ್ತಾನೆ. ಅದು ಪೋಷಕರಿಗೆ ತಿಳಿದರೂ ಅವನು ಗಂಡು ಮಗ ಎಂದು ಸುಮ್ಮನಿರುತ್ತಾರೆ. ಮುಂದೊಂದು ದಿನ ಅದೇ ಸ್ನೇಹಿತರ ಜೊತೆಗೆ ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಆರೋಪಿಯಾಗಿ ಜೈಲು ಸೇರುತ್ತಾನೆ. ಆಗ ಪೋಷಕರು, ಆತ ನಮ್ಮ ಮಗನೇ ಅಲ್ಲ ಎಂದು ಸಲೀಸಾಗಿ ಹೇಳಿ ಜಾರಿಕೊಳ್ಳುತ್ತಾರೆ. ಆದರೆ ತನ್ನ ಮಗನನ್ನು ಜವಾಬ್ದಾರಿಯುತವಾಗಿ ಬೆಳೆಸದಿರುವುದು, ಆತನಿಗೆ ಉತ್ತಮ ಸಂಸ್ಕಾರ ನೀಡದಿರುವುದು, ತಂದೆ, ತಾಯಿಯ ತಪ್ಪು ಎಂದು ಅವರು ಎಂದಿಗೂ ಅರಿತುಕೊಳ್ಳುವುದಿಲ್ಲ.
ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆಗಳು ನಿಲ್ಲಬೇಕಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದರೆ ನಿಲ್ಲುವುದಿಲ್ಲ, ಎನ್ ಕೌಂಟರ್ ಮಾಡಿದರೂ ನಿಲ್ಲುವುದಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಗುಂಡಿಟ್ಟು ಹತ್ಯೆ ಮಾಡಿದರೂ ನಿಲ್ಲುವುದಿಲ್ಲ. ಹಾಗೆ ನಿಲ್ಲುವುದಾದರೆ, ಗಲ್ಫ್ ರಾಷ್ಟ್ರಗಳಲ್ಲಿ ಒಂದೂ ಅತ್ಯಾಚಾರ ಪ್ರಕರಣ ದಾಖಲಾಗುತ್ತಿರಲಿಲ್ಲ. ಈಗಲೂ ಅಲ್ಲಿ ಅತ್ಯಾಚಾರ ಆರೋಪಿಗಳನ್ನು ಗುಂಡಿಟ್ಟು ಹತ್ಯೆ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುತ್ತವೆ. ಅಂದರೆ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಪೋಷಕರು ಹೇಗೆ ಬೆಳೆಸುತ್ತಾರೋ ಹಾಗೆ ಸಮಾಜ ಬದಲಾಗುತ್ತದೆ. ಅತ್ಯಾಚಾರ ಮಾಡುತ್ತಿರುವವನು ಗಂಡು ಆಗಿರುವುದರಿಂದಾಗಿ ಹೆಣ್ಣಿಗೆ ಸಂಸ್ಕಾರ ಹೇಳುವುದಕ್ಕಿಂತಲೂ ಮೊದಲು ಗಂಡಿಗೆ ಪೋಷಕರು ಹೆಚ್ಚಿನ ಸಂಸ್ಕಾರ ನೀಡುವ ಅಗತ್ಯವಿದೆ.