ಮದ್ಯಪಾನ ಮಾಡಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಆಟೋ ಚಾಲಕ, ಆತನ ಇಬ್ಬರು ಸ್ನೇಹಿತರಿಂದ ಕೃತ್ಯ

police
18/04/2025

ಉಳ್ಳಾಲ: ಆಟೋ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಪಶ್ಚಿಮ ಬಂಗಾಲ ಮೂಲದ 20 ವರ್ಷ ವಯಸ್ಸಿನ ಯುವತಿಗೆ ಮದ್ಯಪಾನ ಮಾಡಿಸಿ, ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮುನ್ನೂರು ಗ್ರಾಮದ ಕೊಟ್ಟಾರಿ ಮೂಲೆಯ ಬಂಗ್ಲೆಗುಡ್ಡೆ ಬಳಿ ಬುಧವಾರ ರಾತ್ರಿ ನಡೆದಿದೆ.

ಪಶ್ಚಿಮ ಬಂಗಾಲದ ಕೂಚ್‌ ಬಿಹಾರ್ ಮೂಲದ ಯುವತಿ ಕರ್ನಾಟಕ ಕೇರಳ ಗಡಿಭಾಗದ ಫೈವುಡ್ ಕಾರ್ಖಾನೆಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಬುಧವಾರ ಬೆಳಗ್ಗೆ  ಸ್ನೇಹಿತನೊಂದಿಗೆ ಮಂಗಳೂರಿಗೆ ಬಂದಿದ್ದಳು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಆತನೊಂದಿಗೆ ಗಲಾಟೆಯಾಗಿತ್ತು. ಈ ವೇಳೆ ಆತ ಆಕೆಯ ಮೊಬೈಲ್ ನ್ನು ಹಾನಿ ಮಾಡಿದ್ದ ಎನ್ನಲಾಗಿದೆ.

ಮಂಗಳೂರಿನಲ್ಲಿ ಮೊಬೈಲ್ ರಿಪೇರಿ ಮಾಡಿಸಲು ಯುವತಿ ಆಟೋ ಚಾಲಕ ಪ್ರಭುರಾಜ್ ಎಂಬಾತನ ಬಳಿ ಸಹಾಯ ಕೇಳಿದ್ದಳು. ಆತ ಮೊಬೈಲ್ ಅನ್ನು ರಿಪೇರಿಗೆ ಕೊಟ್ಟು ಐದು ಗಂಟೆಗಳ ಕಾಲ ರಿಕ್ಷಾದಲ್ಲೇ ಯುವತಿಯನ್ನು ಸುತ್ತಾಡಿಸಿದ್ದು, ಬಳಿಕ ಮೊಬೈಲ್ ರಿಪೇರಿಯ ಹಣವನ್ನೂ ಆತನೇ ಪಾವತಿಸಿದ್ದ. ರಾತ್ರಿ ಕಂಕನಾಡಿ ರೈಲು ನಿಲ್ದಾಣದಲ್ಲಿ ಪಶ್ಚಿಮ ಬಂಗಾಲಕ್ಕೆ ತೆರಳುವ ರೈಲಿಗೆ ಹತ್ತಿಸುವುದಾಗಿ ಹೇಳಿ ಊಟಕ್ಕೆ ಕರೆದೊಯ್ದಿದ್ದ. ಅಲ್ಲಿ ಆಕೆಗೆ ಮದ್ಯಪಾನ ಮಾಡಿಸಿದ್ದ. ಇದರಿಂದ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಈ ಸಂದರ್ಭ ಮಿಥುನ್ ಮತ್ತು ಮಣೀಷ್‌ ನನ್ನು ಕರೆಸಿದ್ದ. ಮೂವರೂ ಆಕೆಯನ್ನು ರಾತ್ರಿ ಮುನ್ನೂರು ಗ್ರಾಮದ ಕುತ್ತಾರು ನೇತ್ರಾವತಿ ನದಿ ಬದಿಯ ಬಂಗ್ಲೆಗುಡ್ಡೆ ಬಳಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಯುವತಿಗೆ ಪ್ರಜ್ಞೆ ಬಂದ ಬಳಿಕ ಆಕೆ ಬೊಬ್ಬೆ ಹಾಕಿದ್ದು, ಆಗ ಆರೋಪಿಗಳು ಪರಾರಿಯಾಗಿದ್ದರು.

ನಡುರಾತ್ರಿ 1 ಗಂಟೆಯ ವೇಳೆಗೆ ಘಟನೆ ನಡೆದ ಸ್ಥಳದಿಂದ ಅನತಿ ದೂರದಲ್ಲಿದ್ದ ಮನೆಯೊಂದರ ಬಳಿ ಬಂದು ಆಕೆ ಬಾಗಿಲು ಬಡಿದಿದ್ದಳು. ಮನೆಯವರು ಎದ್ದು ನೋಡಿದಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದು, ನೀರು ಕೇಳಿದಳು. ಆಕೆಯ ಹರಿದ ಬಟ್ಟೆಯನ್ನು ನೋಡಿ ಶಂಕೆಯಿಂದ ನೆರೆಮನೆ ಯವರನ್ನು ಸಹಾಯಕ್ಕೆ ಕರೆದಿದ್ದು, ಬಳಿಕ ನೀರು ನೀಡಲಾಯಿತು. ಆದರೆ ಮತ್ತೆ ಪ್ರಜ್ಞೆ ತಪ್ಪಿ ಬಿದ್ದಳು. ಸ್ಥಳೀಯರು ನೀಡಿದ ಮಾಹಿತಿಯಂತೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು.

ಸದ್ಯ ಗೂಗಲ್ ಪೇ ಆಧಾರದಲ್ಲಿ ರಿಕ್ಷಾದ ಮಾಹಿತಿ ಹಾಗೂ ಚಾಲಕನ ಮಾಹಿತಿ ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಆತನ ಇನ್ನಿಬ್ಬರು ಸ್ನೇಹಿತರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಯುವತಿ ರಿಕ್ಷಾ ಚಾಲಕನಿಗೆ ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿದ್ದಳು. ಹೀಗಾಗಿ ಆರೋಪಿಗಳ ಪತ್ತೆಗೆ ಇದು ಸಹಕಾರಿಯಾಯ್ತು.

ಬಂಗ್ಲೆಗುಡ್ಡೆಯ ನೇತ್ರಾವತಿ ನದಿ ತೀರದಲ್ಲಿ 2 ಖಾಲಿ ಮನೆಯಿದ್ದು, ಇಲ್ಲಿಗೆ ಯುವಕರ ತಂಡ ತಡರಾತ್ರಿ ಆಗಮಿಸಿ ಮಾದಕ ವಸ್ತು ಸೇವಿಸುತ್ತಾರೆ. ಈ ವಿಷಯದಲ್ಲಿ ಮುನ್ನೂರು ಗ್ರಾ.ಪಂ. ಸಭೆಯಲ್ಲಿ ಪ್ರಸ್ತಾವಿಸಿದ್ದು, ಪೊಲೀಸರಿಗೂ ತಿಳಿಸಲಾಗಿದೆ. ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version