ಬಿಜೆಪಿಗೆ ಸೇರ್ಪಡೆಯಾಗಿದ್ದ ತನ್ನ 300 ಕಾರ್ಯಕರ್ತರನ್ನು ಗಂಗಾಜಲದಿಂದ ಶುದ್ಧೀಕರಿಸಿ ಪಕ್ಷಕ್ಕೆ ಸೇರಿಸಿದ ಟಿಎಂಸಿ
ಪಶ್ಚಿಮಬಂಗಾಲ: ವಿಧಾನಸಭಾ ಚುನಾವಣೆ ಸಂದರ್ಭ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡಿದ್ದ 300 ಕಾರ್ಯಕರ್ತರು ಮತ್ತೆ ಟಿಎಂಸಿಗೆ ಸೇರ್ಪಡೆಗೊಂಡಿದ್ದು, ಈ ವೇಳೆ ಬಿಜೆಪಿಗೆ ಸೇರಿದ್ದಕ್ಕಾಗಿ ಅವರಿಗೆ ಗಂಗಾಜಲ ಹಾಕಿ ಶುದ್ಧೀಕರಣ ಮಾಡಲಾಗಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಬಿರ್ ಭುಮ್ ನಲ್ಲಿ ಈ ಘಟನೆ ನಡೆದಿದ್ದು, ಟಿಎಂಸಿಗೆ ಕೈಕೊಟ್ಟು ಬಿಜೆಪಿ ಹಿಂದೆ ಹೋಗಿದ್ದ 300 ಕಾರ್ಯಕರ್ತರು ಮರಳಿ ಟಿಎಂಸಿಗೆ ಬರಲು ಇಚ್ಛಿಸಿದ್ದರು. ಆದರೆ, ಟಿಎಂಸಿ ಇದಕ್ಕೆ ಒಪ್ಪಿರಲಿಲ್ಲ.
ನಮ್ಮನ್ನು ಟಿಎಂಸಿಗೆ ಸೇರ್ಪಡೆ ಮಾಡಿಕೊಳ್ಳಿ ಎಂದು ಪರಿಪರಿಯಾಗಿ ಬೇಡಿದ್ದರೂ ಟಿಎಂಸಿ ಜಗ್ಗಿರಲಿಲ್ಲ. ಹೀಗಾಗಿ ಬಿರ್ ಭುಮ್ ಟಿಎಂಸಿ ಕಚೇರಿ ಎದುರು ಕುಳಿತು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.
ಬಿಜೆಪಿಯನ್ನು ಬೆಂಬಲಿಸಿದ್ದರಿಂದಾಗಿ ನಮ್ಮ ಗ್ರಾಮದ ಅಭಿವೃದ್ಧಿಗೆ ನಾವೆ ತೊಡಕಾದೆವು. ಹಾಗಾಗಿ ನಾವು ಮತ್ತೆ ಟಿಎಂಸಿಗೆ ಸೇರ್ಪಡೆಗೊಳ್ಳುತ್ತೇವೆ ಎಂದು ಬೇಡಿದ್ದರಿಂದಾಗಿ ಕೊನೆಗೂ ಪಕ್ಷದ ಮುಖಂಡರು, ಉಪವಾಸ ಕುಳಿತಿದ್ದ 300 ಕಾರ್ಯಕರ್ತರ ಮೇಲೆ, ಗಂಗಾಜಲವನ್ನು ಹಾಕಿ ಶುದ್ಧೀಕರಿಸಿ ತಮ್ಮ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.