ಗಂಗಾ ನದಿ ದಂಡೆಯ ಮರಳು ಕುಸಿದು ನೀರಿನಲ್ಲಿ ತೇಲಿದ ಮೃತದೇಹಗಳು!
ಲಕ್ನೋ: ಕೊವಿಡ್ ರೋಗಿಗಳ ಮೃತದೇಹವನ್ನು ಗಂಗಾನದಿ ದಂಡೆಯಲ್ಲಿ ಸಾಮೂಹಿಕ ಸಮಾಧಿ ಮಾಡಲಾಗಿರುವ ವರದಿಯ ಬೆನ್ನಲ್ಲೇ, ಇದೀಗ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಮರಳಿನ ದಂಡೆಗಳು ಕುಸಿದು ಶವಗಳು ನೀರಿನಲ್ಲಿ ತೇಲಲು ಆರಂಭವಾಗಿದೆ.
ಮರಳಿನ ದಂಡೆಗಳಿಂದ ನೀರಿಗೆ ಶವಗಳು ಉರುಳಿ ತೇಲುತ್ತಿವೆ. ಇದನ್ನು ನಿಭಾಯಿಸುವುದು ಇದೀಗ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳಿಂದ ಪ್ರಯಾಗ್ ರಾಜ್ ನ ವಿವಿಧ ಘಾಟ್ ಗಳಲ್ಲಿ ತೇಲಿ ಬರುತ್ತಿರುವ ಶವಗಳನ್ನು ಅಧಿಕಾರಿಗಳು ಹಿಡಿಯುತ್ತಿರುವ ದೃಶ್ಯಗಳು ಕಂಡು ಬಂದಿದೆ ಎಂದು ವರದಿಯಾಗಿದೆ.
ಇನ್ನೂ ಕಳೆದ 24 ಗಂಟೆಗಳಲ್ಲಿ 40 ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪ್ರಯಾಗ್ ರಾಜ್ ಮಹಾನಗರ ಪಾಲಿಕೆಯ ವಲಯ ಅಧಿಕಾರಿ ನೀರಜ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರ, ಇಲ್ಲಿ ಪತ್ತೆಯಾಗಿರುವ ಶವಗಳಿಗೂ ಕೊವಿಡ್ ಗೂ ಯಾವುದೇ ಸಂಬಂಧವಿಲ್ಲ. ನದಿ ದಂಡೆಯಲ್ಲಿ ಶವಗಳನ್ನು ಸಮಾಧಿ ಮಾಡುವುದು ದೀರ್ಘ ಕಾಲದಿಂದಲೂ ಪಾಲಿಸಿಕೊಂಡಿರುವ ಸಂಪ್ರದಾಯವಾಗಿದೆ ಎಂದು ಹೇಳಿದೆ.