ಗರ್ಭಿಣಿಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆಗಳು: ಗರ್ಭದಿಂದ ಹೊರ ಬಂದ ಮಗುವಿನ ಕಾಲು
ವಿಜಯಪುರ: ಗರ್ಭಿಣಿಯೋರ್ವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದ ಕಾರಣ ಕುಟುಂಬಸ್ಥರು ನಗರದ ಆಸ್ಪತ್ರೆಗಳಿಗೆ ಅಲೆದಾಡಿದ್ದು, ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗದ ಕಾರಣ ಮಗು ತಾಯಿಯ ಗರ್ಭದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಬಬಲೇಶ್ವರ ಗರ್ಭಿಣಿ ಮಹಿಳೆ ಹನುಮವ್ವ ಕೊರವರ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿತ್ತು. ಆದರೆ ತಾಯಿಯ ಕಾರ್ಡ್ ನಲ್ಲಿ ಹೈರಿಸ್ಕ್ ಪ್ರೆಗ್ನೆನ್ಸಿ ಎಂದು ಉಲ್ಲೇಖಿಸಲಾಗಿದ್ದರಿಂದ ವಿಜಯಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದಾರೆ.
ವಿಜಯಪುರಕ್ಕೆ ಬಂದ ವೇಳೆ ಯಾವುದೇ ಆಸ್ಪತ್ರೆಗಳಲ್ಲಿ ಮಹಿಳೆಯನ್ನು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಆಂಬುಲೆನ್ಸ್ ಮೂಲಕ ಹಲವು ಆಸ್ಪತ್ರೆಗಳಿಗೆ ಅಲೆದಾಡಿ ಬಳಿಕ ಜಲನಗರದ ಸಂಜೀವ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಸಂಜೀವ ಹೆರಿಗೆ ಆಸ್ಪತ್ರೆಗೆ ಬಂದು ತಲುಪಿದ ವೇಳೆ ಮಗುವಿನ ಕಾಲು ಗರ್ಭದಿಂದ ಹೊರ ಬಂದಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಮಗುವಿನ ಕುತ್ತಿಗೆ ಕರುಳು ಸುತ್ತಿಕೊಂಡಿದ್ದು, ಹೀಗಾಗಿ ಮಗು ಸಾವನ್ನಪ್ಪಿದೆ. ಇದೇ ವೇಳೆ ಮಾನವೀಯತೆ ಮೆರೆದ ಆಸ್ಪತ್ರೆಯ ವೈದ್ಯ ವಿಜಯಕುಮಾರ್ ಅವರು ಶಸ್ತ್ರಚಿಕಿತ್ಸೆ ನಡೆಸಿ ತಾಯಿಯ ಜೀವವನ್ನು ಉಳಿಸಿದ್ದಾರೆ.
ರಾಜ್ಯದಲ್ಲಿ ಜನರು ರೋಗದಿಂದ ಸಾಯುವುದಕ್ಕಿಂತಲೂ ಹೆಚ್ಚು ವೈದ್ಯಕೀಯ ಕೊರತೆಗಳಿಂದಲೇ ಸಾವನ್ನಪ್ಪುತ್ತಿದ್ದಾರೆ. ಹೆರಿಗೆಗೆ ಆಗಮಿಸಿದ ಗರ್ಭಿಣಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೇ ಬೆಡ್ ಇಲ್ಲ ಎಂದು ಕಳುಹಿಸುವ ಆಸ್ಪತ್ರೆಗಳ ಮೇಲೆ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಸರ್ಕಾರ ಹಾಗೂ ಸಚಿವರು ಖಾಸಗಿ ಆಸ್ಪತ್ರೆಗಳ ಮೇಲೆ ಮೃಧುಧೋರಣೆ ತಳೆದಿದ್ದಾರೆ. ಜನರನ್ನು ಸಮಾಧಾನಪಡಿಸಲು “ಸೂಕ್ತ ಕ್ರಮ, ಕಠಿಣ ಕ್ರಮ” ಎಂದೆಲ್ಲ ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.