ಎಲ್ ಪಿಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆ | ಮಧ್ಯಮ ವರ್ಗಗಳಿಗೆ ಮತ್ತೊಂದು ಶಾಕ್!
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100ರ ಗಡಿಯತ್ತ ಸಾಗಿದೆ. ಎಲ್ ಪಿಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ ಎಲ್ ಪಿಜಿ ಸಿಲಿಂಡರ್ ದರ ಭಾನುವಾರ ಬೆಂಗಳೂರಿನಲ್ಲಿ 722 ರೂ. ಇತ್ತು. ಈಗ 772 ರೂ.ಗೆ ಏರಿಕೆಯಾಗಿದೆ.
ಡಿಸೆಂಬರ್ ನಿಂದ ಇಲ್ಲಿಯವರೆಗೆ 3 ಬಾರಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಫೆ.4ರಂದು 25 ರೂ. ಬೆಲೆ ಏರಿಕೆಯಾಗಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆ, ಪೆಟ್ರೋಲ್, ಡೀಸೆಲ್ ಗಳು ದುಬಾರಿಯಾದ ಬಳಿಕ ಸಿಲಿಂಡರ್ ಬೆಲೆಯಲ್ಲಿಯೂ ಏರಿಕೆ ಮಾಡಲಾಗಿದೆ.
ಸಿಲಿಂಡರ್ ಬೆಲೆ ದೆಹಲಿಯಲ್ಲಿ 769, ಕೋಲ್ಕತ್ತಾದಲ್ಲಿ 795, ಮುಂಬೈ 769, ಚೆನ್ನೈ 785 ರೂಪಾಯಿ ದರ ಏರಿಕೆಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವುದರಿಂದ ಭಾರತದಲ್ಲಿ ಕೂಡ ಬೆಲೆ ಏರಿಕೆ ಆಗಿದೆ ಎಂದು ಸರ್ಕಾರದ ಪರ ಮಾಧ್ಯಮಗಳು ವಾದಿಸಿವೆ.
ಕೊವಿಡ್ 19ನಿಂದ ತತ್ತರಿಸಿರುವ ಜನತೆಗೆ ಆಧಾರವಾಗಬೇಕಿದ್ದ ಸರ್ಕಾರ, ಬೆಲೆ ಏರಿಕೆಗಳ ಸರಮಾಲೆಯನ್ನೇ ಜನರ ಹೆಗಲಿಗೆ ಹೊರಿಸಿದೆ. ಇದರಿಂದ ಜನತೆ ತತ್ತರಿಸಿದ್ದಾರೆ. ಸರ್ಕಾರದಿಂದ ಪಡೆದುಕೊಳ್ಳುವುದಕ್ಕಿಂತಲೂ ಕಳೆದುಕೊಳ್ಳುತ್ತಿರುವುದೇ ಹೆಚ್ಚಾಗುತ್ತಿದೆ. ಹೀಗಾದರೆ, ಮಧ್ಯಮ ವರ್ಗದ ಜನರ ಜೀವನ ಹೇಗೆ ಸಾಗಬೇಕು ಎನ್ನುವ ಆತಂಕದ ಮಾತುಗಳು ಕೇಳಿ ಬಂದಿವೆ.