ಅಪಘಾತದ ಸ್ಥಳದಲ್ಲಿದ್ದರೂ ಗಾಯಾಳುವನ್ನು ತಿರುಗಿಯೂ ನೋಡದ ಬಿಜೆಪಿ ಶಾಸಕ
ಚಿಕ್ಕಮಗಳೂರು: ಹಿರಿಯ ಆರೋಗ್ಯ ನಿರೀಕ್ಷಕ ಡಾ.ರಮೇಶ್ ಕುಮಾರ್ ಎಂಬವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ, ಸ್ಥಳದಲ್ಲಿಯೇ ಇದ್ದ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲೂ ಮುಂದಾಗದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತರೀಕೆರೆ ಸಮೀಪದ ಲಕ್ಕವಳ್ಳಿ ಕ್ರಾಸ್‌ನಲ್ಲಿ ವೈದ್ಯ ರಮೇಶ್ ಅವರ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಬುಧವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಅಪಘಾತದಿಂದ ರಮೇಶ್ ತೀವ್ರವಾಗಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ತರೀಕೆರೆ ಶಾಸಕ ಸುರೇಶ್ ಇದ್ದು, ತಮ್ಮ ಕಾರಿನಲ್ಲಿಯೇ ಕುಲಿತುಕೊಂಡು, ಕನಿಷ್ಠ ಹೊರ ಬಾರದೇ ಅಮಾನವೀಯತೆ ತೋರಿದ್ದಾರೆ. ಒಬ್ಬ ಜನಪ್ರತಿ ನಿಧಿಯಾಗಿ ಎಲ್ಲರಿಗೂ ಮಾದರಿಯಾಗಬೇಕಾಗಿದ್ದ ಶಾಸಕನ ನಡವಳಿಕೆಗಳು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಡಾ.ರಮೇಶ್ ಅವರು ಕೊರೊನಾ ಕರ್ತವ್ಯ ಮುಗಿಸಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ತರೀಕೆರೆ ಶಾಸಕ ಸುರೇಶ್ ಅವರ ಸ್ಥಾನದಲ್ಲಿ ಆ ಪ್ರದೇಶದಲ್ಲಿ ಬೇರೆ ಯಾರೇ ಇರುತ್ತಿದ್ದರೂ, ಅವರು ತಮ್ಮ ಕಾರಿನಲ್ಲಿಯೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದರು. ಬಹಳಷ್ಟು ಜನಪ್ರತಿನಿಧಿಗಳು ಈ ರೀತಿಯ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದರು. ಆದರೆ, ಶಾಸಕ ಸುರೇಶ್ ಅವರು ಅಪಘಾತದ ಕಡೆಗೆ ಕಣ್ಣೆತ್ತಿಯೂ ನೋಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ವೈದ್ಯ ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.