ಗಾಝಾ ಇಸ್ರೇಲ್ ವಾರ್: ಶೀಘ್ರದಲ್ಲೇ ಕದನ ವಿರಾಮ? ಒಪ್ಪಂದ ಆಗುತ್ತಾ?
ಗಾಝಾಕ್ಕೆ ಸಂಬಂಧಿಸಿ ಕದನ ವಿರಾಮ ಮಾತುಕತೆಯು ಅಂತಿಮ ಹಂತದಲ್ಲಿದೆ ಮತ್ತು ಕೆಲವೇ ದಿನಗಳಲ್ಲಿ ಒಪ್ಪಂದ ಏರ್ಪಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕತಾರ್ ಮತ್ತು ಈಜಿಪ್ಟಿನ ಮಧ್ಯಸ್ಥಿಕೆಯಲ್ಲಿ ಖತರ್ ನಲ್ಲಿ ನಡೆದ ಚರ್ಚೆಯಲ್ಲಿ ಬಂಧಿಗಳ ಮತ್ತು ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಹಾಗೂ ಕದನ ವಿರಾಮದ ಬಗ್ಗೆ ನಿರ್ಧಾರವಾಗಿತ್ತು. ಇಸ್ರೇಲ್ ಹೊಸ ಶರತ್ತುಗಳನ್ನು ವಿಧಿಸದಿದ್ದರೆ ತಕ್ಷಣವೇ ಕದನ ವಿರಾಮ ಜಾರಿಗೆ ಬರಲಿದೆ ಎಂದು ಹಮಾಸನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಈಗಾಗಲೇ ನಡೆದಿರುವ ಚರ್ಚೆಯ ಪ್ರಕಾರ,
ಕದನ ವಿರಾಮ ಏರ್ಪಡಬೇಕು ಮತ್ತು ನಗರಗಳಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂಪಡೆಯಬೇಕು. ಆದರೆ ಗಾಝಾದ ಪಶ್ಚಿಮ ಪೂರ್ವದ ಮಧ್ಯೆ ಇಸ್ರೇಲ್ ಹೊಸದಾಗಿ ನಿರ್ಮಿಸಿರುವ ನೆಟ್ಜರಿನ್ ಸೇನಾ ಠಾಣೆ ಮತ್ತು ರಫಾ ಗಡಿಭಾಗದ ಹತ್ತಿರ ಫಿಲಡೆಲ್ಫಿ ಸೇನಾ ಠಾಣೆ ಮುಂದುವರೆಯಲಿದೆ. ಪೂರ್ವ ಭಾಗಕ್ಕೆ ಮಕ್ಕಳು ಮತ್ತು ಮಹಿಳೆಯರಿಗೆ ಮರಳಿ ಬರಲು ಅವಕಾಶ ನೀಡಲಾಗುವುದು. ಆದರೆ ಪುರುಷರು ಮರಳುವುದಕ್ಕಾಗಿ ಕಾಯಬೇಕಾಗಿದೆ. ಹಾಗೆಯೇ ರಫ ಗಡಿಯ ನಿಯಂತ್ರಣವನ್ನು ಫೆಲೆಸ್ತೀನಿ ಅಥಾರಿಟಿಗೆ ವಹಿಸಿ ಕೊಡುವುದು ಕೂಡ ತಡವಾಗಲಿದೆ.
ಗಾಝಾದಿಂದ ಇಸ್ರೇಲ್ ಸೇನೆ ಸಂಪೂರ್ಣವಾಗಿ ಹಿಂದಕ್ಕೆ ಹೋಗಬೇಕು ಎಂದು ಈ ಮೊದಲು ಹಮಾಸ್ ಆಗ್ರಹಿಸಿತ್ತು. ಆದರೆ ಇದೀಗ ಈ ಆಗ್ರಹದಿಂದ ತಾತ್ಕಾಲಿಕವಾಗಿ ಹಿಂಜರಿಯಲು ಹಮಾಸ್ ಒಪ್ಪಿಕೊಂಡಿದೆ.
ಯಹ್ಯಾ ಸಿನ್ವಾರ್ ಮತ್ತು ಇಸ್ಮಾಯಿಲ್ ಹನಿಯ ಅವರ ಹತ್ಯೆ ನಡೆದ ಬಳಿಕವೂ ಮತ್ತು ಹಿಝ್ಬುಲ್ಲ ದುರ್ಬಲವಾದ ಬಳಿಕವೂ ಹಮಾಸ್ ತನ್ನ ಬೇಡಿಕೆಯಿಂದ ಈವರೆಗೂ ಹಿಂಜರಿದಿರಲಿಲ್ಲ. ಅಲ್ಲದೆ ಇನ್ನೊಂದು ಕಡೆ ಕದನ ವಿರಾಮಕ್ಕೆ ಇನ್ನೇನು ಒಪ್ಪಿಕೊಳ್ಳುತ್ತದೆ ಎಂಬ ಸ್ಥಿತಿಗೆ ತಲುಪಿ ಆ ಬಳಿಕ ಅದನ್ನು ಉಲ್ಲಂಘಿಸುವುದನ್ನು ಇಸ್ರೇಲ್ ಹಲವು ಬಾರಿ ನಡೆಸಿಕೊಂಡು ಬಂದಿದೆ.
ಈವರೆಗೆ ಇಸ್ರೇಲ್ ದಾಳಿಯಿಂದ 45 ಸಾವಿರಕ್ಕಿಂತಲೂ ಅಧಿಕ ಫೆಲೆಸ್ತೀನಿಯರು ಹತ್ಯೆಗೀಡಾಗಿದ್ದಾರೆ. 1 ಲಕ್ಷಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj