ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸೋಮಣ್ಣನವರಿಗೆ ಘೇರಾವ್: ಸಿದ್ದರಾಮಯ್ಯಗೆ ಜಯಕಾರ
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಐದು ದಿನಗಳ ಕಾಲ ಪ್ರಚಾರ ಹಮ್ಮಿಕೊಂಡಿದ್ದು, ಮೊದಲ ದಿನವೇ ಪ್ರತಿಭಟನೆಯನ್ನು ಎದುರಿಸಿದ್ದಾರೆ.
ಕೆಲವು ಯುವಕರು ಸಿದ್ದರಾಮಯ್ಯನವರಿಗೆ ಜೈಕಾರ ಕೂಗಿ, ಬಿಜೆಪಿಗೆ ಧಿಕ್ಕಾರ ಎನ್ನುತ್ತಾ ಸೋಮಣ್ಣನವರಿಗೆ ಘೇರಾವ್ ಹಾಕಿರುವ ಘಟನೆ ಕ್ಷೇತ್ರದ ಭುಗತಹಳ್ಳಿಯಲ್ಲಿ ನಡೆದಿದೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ವೇಳೆ ಯುವಕನೋರ್ವ, ಸಚಿವ ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿದ್ದಾನೆ. ಭಾಷಣ ಮುಗಿಯುವವರೆಗೂ ಕಾಯುವಂತೆ ಸೋಮಣ್ಣ ಸೂಚನೆ ನೀಡಿದ್ದರು. ಬಳಿಕ ಸೋಮಣ್ಣನವರ ಭಾಷಣ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಪರ ಘೋಷಣೆ ಕೂಗಲಾಗಿದೆ. ಮತ್ತೊಂದು ಯುವಕರ ಗುಂಪು ಬಿಜೆಪಿ ಮತ್ತು ಸೋಮಣ್ಣನವರ ಪರ ಘೋಷಣೆ ಕೂಗಿದೆ. ಹೀಗಾಗಿ ಭುಗತಹಳ್ಳಿಯಲ್ಲಿ ಪ್ರಚಾರವನ್ನು ಕೈಬಿಟ್ಟು ಸೋಮಣ್ಣನವರು ಬೇರೊಂದು ಗ್ರಾಮಕ್ಕೆ ತೆರಳಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರವು ರಾಜ್ಯದ ಗಮನ ಸೆಳೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಸತಿ ಸಚಿವ ವಿ.ಸೋಮಣ್ಣನವರನ್ನು ಬಿಜೆಪಿ ಕಣಕ್ಕಿಳಿಸಿದೆ. ಹೀಗಾಗಿ ಇಬ್ಬರು ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೊತೆಗೆ ರಾಜಕಾರಣಿಗಳು ಜನರ ಆಕ್ರೋಶಕ್ಕೂ ಗುರಿಯಾಗುತ್ತಿದ್ದಾರೆ.
ಈ ಹಿಂದೆ ಏಪ್ರಿಲ್ 18ರಂದು ಸಹ ಸೋಮಣ್ಣ ವರುಣಾ ಕ್ಷೇತ್ರದ ಲಲಿತಾದ್ರಿಪುರದಲ್ಲಿ ಪ್ರಚಾರಕ್ಕೆ ಬಂದಿದ್ದ ವೇಳೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಮತ ಕೇಳಲು ಬಂದಿದ್ದೀರಿ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದರು. ಮೈಸೂರು ಕೊಡಗು ಬಿಜೆಪಿ ಸಂಸದ ಸಂಸದ ಪ್ರತಾಪ್ ಸಿಂಹ ಅವರಿಗೂ ಪ್ರತಿಭಟನೆಯ ಬಿಸಿ ತಟ್ಟಿತ್ತು. ಯುವಕನೋರ್ವ ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು.
ನಾವು ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂದು ಬಿಜೆಪಿಯವರು ಹೇಳಿದ್ದೀರಿ. ಸಂವಿಧಾನ ರಚಿಸಿದ ಅಂಬೇಡ್ಕರ್ ಅಭಿಮಾನಿಗಳಾದ ನಾವು ನಿಮ್ಮನ್ನು ಹೇಗೆ ಬೆಂಬಲಿಸುವುದು?” ಎಂದು ಗ್ರಾಮಸ್ಥರು ಕೇಳಿದ್ದರು.
”ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ನಿಮ್ಮದೇ ಸರ್ಕಾರವಿದ್ದಾಗ ರಸ್ತೆರಾಜ ಎಂದು ಬಿರುದು ಕೊಟ್ಟಿದ್ರಿ. ಈಗ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣವಾದ ಮೇಲೆ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದೀರಿ ಇದು ಸರಿಯೇ?” ಎಂದು ಕೇಳಿ ತರಾಟೆಗೆ ತೆಗೆದುಕೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw