ಅಗಲಿದ ಸಹಪಾಠಿ ವಿದ್ಯಾರ್ಥಿಯ ಕುಟುಂಬಕ್ಕೆ ತಾನು ಕೂಡಿಟ್ಟ ಹಣವನ್ನು ದಾನ ಮಾಡಿ ಮಾದರಿಯಾದ 2 ನೇ ತರಗತಿ ವಿದ್ಯಾರ್ಥಿನಿ
ಸ್ಕೂಲಿನಲ್ಲಿ ಕಲಿಯುತ್ತಿರುವಾಗ ನಮ್ಮೊಂದಿಗೆ ಕಲಿತಿದ್ದ ಸಹಪಾಠಿ ವಿದ್ಯಾರ್ಥಿಯ ಅಗಲುವಿಕೆ ಅಲ್ಲಿನ ವಿದ್ಯಾರ್ಥಿಗಳನ್ನು ನೋವಿನ ಮಡಿಲಿಗೆ ತಳ್ಳುತ್ತದೆ. ಊಹಿಸಲೂ ಅಸಾಧ್ಯವಾದ ನೋವು ಅವರನ್ನು ಕಾಡುತ್ತದೆ. ಇಂತಹದೇ ಘಟನೆಗೆ ಮರುಗಿದ ಸಹಪಾಠಿ ವಿದ್ಯಾರ್ಥಿಯು ತಾನು ವರ್ಷವಿಡೀ ಮಾಡಿದ ಉಳಿತಾಯವನ್ನೇ ಅಗಲಿದ ವಿದ್ಯಾರ್ಥಿಯ ಕುಟುಂಬಕ್ಕೆ ನೀಡಿ ಸಾರ್ಥಕತೆ ತೋರಿದ್ದಾರೆ.
ಹೌದು. ಮಂಗಳೂರಿನ ಸುರತ್ಕಲ್ ಕೃಷ್ಣಾಪುರ ಚೈತನ್ಯ ಆಂಗ್ಲ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಅಕಾಲವಾಗಿ ಮರಣಕ್ಕೀಡಾದರು. ವಿದ್ಯಾರ್ಥಿಯ ಈ ಅನಿರೀಕ್ಷಿತ ಸಾವು ಇಡೀ ಶಾಲೆಯನ್ನೇ ದುಃಖದ ಮಡಿಲಿಗೆ ನೂಕಿತು. ತಮ್ಮೊಂದಿಗೇ ಆಟ ಪಾಠದಲ್ಲಿ ಬೆರೆಯುತ್ತಿದ್ದ ಬಾಲಕನ ಅನಿರೀಕ್ಷಿತ ಸಾವು ಅಲ್ಲಿನ ವಿದ್ಯಾರ್ಥಿಗಳಿಗೆ ಅಪಾರ ನೋವನ್ನು ತಂದಿತ್ತು. ಬಡ ಕುಟುಂಬದ ಆ ವಿದ್ಯಾರ್ಥಿಯ ಮರಣವು, ಇನ್ನಷ್ಟು ಸಂಕಟಕ್ಕೆ ದೂಡಿತ್ತು. ಈ ಸಂದರ್ಭದಲ್ಲಿ ಚೈತನ್ಯ ಶಾಲೆಯ ಆಡಳಿತ ಮಂಡಳಿಯು ಆ ಬಾಲಕನ ಕುಟುಂಬಕ್ಕೆ 50 ಸಾವಿರ ನೆರವು ನೀಡಿತು. ಅಲ್ಲದೇ, ತಮ್ಮಿಂದಾದ ನೆರವು ನೀಡುವಂತೆ ಶಾಲೆಯ ವಿದ್ಯಾರ್ಥಿಗಳನ್ನು ಕೋರಿತು. ಇದಕ್ಕೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳೂ ಸ್ಪಂದಿಸಿ ನೆರವು ನೀಡಿದರು. ಶಾಲಾಡಳಿತದ ಕೋರಿಕೆಯು ಆ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿ ಐಝಾ ಮರಿಯಂ ಎಂಬುವವಳಿಗೆ ಹೃದಯದ ಆಳಕ್ಕೆ ಇಳಿಸಿತು.
ಅಂದು ಶಾಲೆಯಿಂದ ಮನೆಗೆ ಬಂದವಳೇ ನೇರ ಡಬ್ಬಿಯೊಂದನ್ನು ತೆಗೆದು ಶಾಲಾ ಬ್ಯಾಗಿನಲ್ಲಿಟ್ಟಳು. ಹಣಕಾಸು ಉಳಿತಾಯದ ಬಗ್ಗೆ ಈಕೆಯ ಪಾಲಕರು ಇವಳಿಗೆ ತಿಳಿಸಿ, 7-8 ತಿಂಗಳ ಹಿಂದೆ ಹಣ ಕೂಡಿಡಲು ಡಬ್ಬಿಯೊಂದನ್ನು ಕೊಟ್ಟಿದ್ದರು. ಹಾಗೆಯೇ, ತನಗೆ ಸಿಗುತ್ತಿದ್ದ 1, 2, 5, 10 ರೂಪಾಯಿಗಳನ್ನೆಲ್ಲಾ ಐಝಾ ಮರಿಯಂ ಈ ಡಬ್ಬಿಯಲ್ಲಿ ಸಂಗ್ರಹಿಸಿಟ್ಟಿದ್ದಳು. ಮುಂಬರುವ ಈದ್ ಹಬ್ಬದ ಸಂದರ್ಭದಲ್ಲಿ ಈ ಡಬ್ಬಿಯನ್ನು ತೆರಯಲು ನಿರ್ಧರಿಸಿದ್ದಳು. ಬಹುತೇಕ ಈ ಡಬ್ಬಿ ತುಂಬಿತ್ತು. ಆದರೆ, ತನ್ನ ಶಾಲೆಯ ವಿದ್ಯಾರ್ಥಿಯ ಮರಣವು ಆಕೆಯನ್ನು ಅಪಾರ ನೋವಿಗೀಡು ಮಾಡಿತ್ತು. ಸಾವಿಗೀಡಾದ ವಿದ್ಯಾರ್ಥಿಯ ಕುಟುಂಬಕ್ಕೆ ನೆರವು ನೀಡಲು ಶಾಲಾಡಳಿತ ಮಾಡಿದ ಕೋರಿಕೆಯು ಈ ಕಂದಮ್ಮನಿಗೆ ಸ್ಪಂದಿಸಲು ಪ್ರೇರೇಪಣೆ ಸಿಕ್ಕಿತು.
ಕೋರಿಕೆಗೆ ಮರುಗಿದ ಐಝಾ ಮರಿಯಂ, ತಾನು ಹಲವು ದಿನಗಳಿಂದ ಸಂಗ್ರಹಿಸಿಟ್ಟಿದ್ದ ಉಳಿತಾಯದ ಡಬ್ಬಿಯನ್ನೇ ಸಾವಿಗೀಡಾದ ವಿದ್ಯಾರ್ಥಿಯ ಕುಟುಂಬಕ್ಕೆ ನೀಡಲು ನಿರ್ಧರಿಸಿ, ಪಾಲಕರ ಬಳಿ ತಿಳಿಸಿದಳು. ಮಗಳ ಈ ಮಾನವೀಯ ಕೋರಿಕೆಗೆ ಮರುಗಿದ ಆ ಪಾಲಕರು ತಕ್ಷಣವೇ ಒಪ್ಪಿಗೆ ನೀಡಿದರು. ಹಾಗೆಯೇ, ಮರುದಿವಸವೇ ಐಝಾ ಮರಿಯಂ, ಚೈತನ್ಯ ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ತಾನು ಉಳಿತಾಯ ಮಾಡಿದ ಹಣದ ಡಬ್ಬಿಯನ್ನೇ ಕೊಟ್ಟು, ಸಾವಿಗೀಡಾದ ಬಾಲಕನ ಕುಟುಂಬಕ್ಕೆ ನೀಡಲು ವಿನಂತಿಸಿದರು. ವಿದ್ಯಾರ್ಥಿಯ ಈ ಹೃದಯಸ್ಪರ್ಶಿ ನೆರವು ಕಂಡು ಆ ಮುಖ್ಯೋಪಾಧ್ಯಾಯರಿಗೂ ಹೃದಯ ತುಂಬಿ ಬಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw