ಬೆಂಗಳೂರಿನ ವಿದ್ಯಾರ್ಥಿನಿಯರ ಚಿನ್ನದ ಸಾಧನೆ: ಪ್ಯಾರಾ ಏಷ್ಯನ್ ಗೇಮ್ಸ್ 2023
ಬೆಂಗಳೂರು: ಚೀನಾದ ಹಾಂಗ್ ಝೌನಲ್ಲಿ ನಡೆಯುತ್ತಿರುವ 2023 ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿಯೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಅದರಂತೆ ಬೆಂಗಳೂರಿನ ಕೆ.ಆರ್.ಪುರಂ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ರಕ್ಷಿತಾ ರಾಜು, ತೃತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ರಾಧಾ ವೆಂಕಟೇಶ್ ಕೂಡ ಇದೀಗ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
ಅಂಧ ಓಟಗಾರ್ತಿಯಾಗಿರುವ ರಕ್ಷಿತಾ ರಾಜು 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಬುಧವಾರ ನಡೆದ ಟಿ-11 ವಿಭಾಗದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ 5 ನಿಮಿಷ 21.45 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಇನ್ನು ಮತ್ತೋರ್ವ ವಿದ್ಯಾರ್ಥಿನಿ ರಾಧಾ ವೆಂಕಟೇಶ್ ಟಿ-15 ವಿಭಾಗದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ 5 ನಿಮಿಷ 19.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿರುತ್ತಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಈ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ಬೆಂಗಳೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರಂ, ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇವರಿಬ್ಬರೂ ಕಾಲೇಜಿನ ಪ್ರಾಂಶುಪಾಲರು, ಕ್ರೀಡಾ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.