ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ವಾಹನ ತಡೆದು ಶ್ರೀರಾಮಸೇನೆ ಕಾರ್ಯಕರ್ತರಿಂದ ಗೂಂಡಾಗಿರಿ: ಕಾರಿಗೆ ಬೆಂಕಿ

ದೇವನಹಳ್ಳಿ: ಅಕ್ರಮವಾಗಿ 15 ಟನ್ ಗೋಮಾಂಸ ಸಾಗಿಸಲಾಗುತ್ತಿತ್ತೆನ್ನಲಾದ ನಾಲ್ಕು ಗೂಡ್ಸ್ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದ ಘಟನೆ ನಡೆದಿದ್ದು, ಈ ವೇಳೆ ಗೋಮಾಂಸ ಸಾಗಾಟಗಾರರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಗೋಮಾಂಸ ಸಾಗಾಟ ಮಾಡುತ್ತಿದ್ದವರ ಕಾರಿಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಐಬಿ ವೃತ್ತದಲ್ಲಿ ನಡೆದಿದೆ.
ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಗೂಡ್ಸ್ ವಾಹನಗಳಲ್ಲಿದ್ದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಕಾರಿಗೆ ಬೆಂಕಿ ಹಚ್ಚಿದರೂ ಸಮಾಧಾನಗೊಳ್ಳದ ಶ್ರೀರಾಮಸೇನೆ ಕಾರ್ಯಕರ್ತರು, ಗೋಮಾಂಸ ಸಾಗಾಟ ಮಾಡುತ್ತಿದ್ದವರ ತಲೆಯ ಮೇಲೆ ಹಸುಗಳ ರುಂಡಗಳನ್ನು ಇರಿಸಿದ್ದು, ಎದೆಗೆ ಒದ್ದು ಗೂಂಡಾಗಿರಿ ಪ್ರದರ್ಶಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಹಲ್ಲೆ ನಡೆಸದಂತೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗೂಂಡಾಗಿರಿ ನಡೆಸಿದ 20 ಕ್ಕೂ ಅಧಿಕ ಶ್ರೀರಾಮಸೇನೆ ಕಾರ್ಯಕರ್ತರನ್ನು ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಮೊಕ್ಕಾಂ ಹೂಡಿದ್ದಾರೆ. ಐಬಿ ವೃತ್ತ ಹಾಗೂ ಗುಂಜೂರು ಟೋಲ್ಗಳ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.