ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಸದ್ಭಾವನಾ ಪಾದಯಾತ್ರೆ
ಬೆಂಗಳೂರು: ಗಾಂಧೀಜಿ ಅವರ ಜನ್ಮದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ 9:30 ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್ .ಎಸ್. ಎಸ್ ನ ರಾಜ್ಯಾಧಿಕಾರಗಳಾದ ಪ್ರತಾಪ್ ಲಿಂಗಯ್ಯ ಅವರು ಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಜೊತೆಗೆ ಹಸಿರು ಬಾವುಟ ತೋರಿಸುವ ಮೂಲಕ ಸದ್ಭಾವನಾ ಪಾದಯಾತ್ರೆಗೆ ಚಾಲನೆ ನೀಡಿದರು.
ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಾಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕಸ್ತೂರಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅರಸೀಕೆರೆ ಗಾಂಧೀ ಶಾಂತಿ ಪ್ರತಿಷ್ಠಾನ ಬೆಂಗಳೂರು, ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಈ ಸದ್ಭಾವನಾ ಪಾದಯಾತ್ರೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು, ಉಪಾಧ್ಯಕ್ಷರಾದ ಎನ್. ಆರ್. ವಿಶುಕುಮಾರ್, ಗೌರವ ಕಾರ್ಯದರ್ಶಿಗಳಾದ ಇಂದಿರಾ ಕೃಷ್ಣಪ್ಪ ಅವರು ಸೇರಿದಂತೆ ಮತ್ತಿತರ ಗಣ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಾಂಧಿ ಅವರ ಸಂದೇಶ ಇರುವ ಫಲಕಗಳನ್ನು ಹಿಡಿದು ಗಾಂಧಿಭವನದವರೆಗೆ ಸಾಗಿದರು.
ಇನ್ನು ಗಾಂಧಿಯವರ 154ನೇ ಜನ್ಮ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧ ಹಾಗೂ ವಿಕಾಸ ಸೌಧದ ನಡುವೆ ಇರುವ ಗಾಂಧಿಯವರ ಪ್ರತಿಮೆಯ ಬಳಿ ಗಾಂಧಿ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹಮದ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.