ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ: ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಸಿಎಂ ಹೇಳಿದ್ದೇನು? - Mahanayaka

ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ: ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಸಿಎಂ ಹೇಳಿದ್ದೇನು?

siddaramaiah
13/12/2024

ಬೆಂಗಳೂರು: ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ, ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ, ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಕಾನೂನು ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.

ಸ್ವಾಮೀಜಿಗಳಿಗೂ ಅವರ ಅಭಿಪ್ರಾಯ ತಿಳಿಸಲು ಸ್ವಾತಂತ್ರ್ಯವಿದೆ. ಅಂತಿಮವಾಗಿ ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತೇವೆ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿ ಸಮುದಾಯದ ಜನರ ಮೇಲೆ ಪೊಲೀಸರು ಕಲ್ಲು ಹೊಡೆದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ವಾಸ್ತವವಾಗಿ ಬಿಜೆಪಿಗರು ಕಲ್ಲು ಹೊಡೆದಿರುವುದು, ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗುವುದರ ಫೋಟೋಗಳನ್ನು ತೋರಿಸುತ್ತೇವೆ. ಸ್ವಾಮೀಜಿಗಳು ರಸ್ತೆಯಲ್ಲಿ ಏಕೆ ಕುಳಿತುಕೊಂಡಿದ್ದಾರೆ? ಪ್ರತಿಭಟನಾಕಾರರು ಕಲ್ಲು ತೂರದಿದ್ದರೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಹೇಗಾಯಿತು. ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ? ನಾನು ಹೇಳಿರುವುದಕ್ಕೆ ಸಾಕ್ಷಿಯಿದೆ ಎಂದು ಸಿಎಂ ಹೇಳಿದರು.

ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮುಂದೆ ಹೋಗಬೇಕು. ಬಿಜೆಪಿ ಕಾಲದಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆಯವರ ವರದಿಯಲ್ಲಿ ಈಗಿರುವಂತೆಯೇ ಪ್ರವರ್ಗ 2ಎ 2ಬಿ ಇರಬೇಕು. ಇದಕ್ಕೆ ಹೊಸ ಸೇರ್ಪಡೆಯಾಗಬಾರದು. 2ಬಿ ಯಲ್ಲಿರುವ 4% ಮೀಸಲಾತಿಯನ್ನು ರದ್ದು ಮಾಡಬಾರದು.

ಬಿಜೆಪಿ ಅವಧಿಯಲ್ಲಿ ಆಗಿದ್ದಕ್ಕೆ ಅಂದು ಪ್ರತಿಭಟನೆ ಏಕಾಗಲಿಲ್ಲ? ಈಗ ಅದೇ ಬಿಜೆಪಿಯವರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಮುಸಲ್ಮಾನರಿಗೆ ಇದ್ದ ಶೇ.4 ರ ಮೀಸಲಾತಿಯನ್ನು ರದ್ದುಮಾಡಿ 3ಎ ಒಕ್ಕಲಿಗರಿಗೆ 2% ಮತ್ತು 3ಬಿ ಪ್ರವರ್ಗಗಳಿಗೆ ಲಿಂಗಾಯತರಿಗೆ 2% ಮೀಸಲಾತಿ ನೀಡಿದರು. ಇದನ್ನು ಪ್ರಶ್ನಿಸಿ ಮುಸಲ್ಮಾನರಾದ ರಸೂಲ್ ಎಂಬ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರವೇ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿತ್ತು ಎಂದು ತಿಳಿಸಿದರು.

ಪಂಚಮಸಾಲಿ ಹೋರಾಟವನ್ನು ಟ್ರ್ಯಾಕ್ಟರ್ ತರುವ ಮೂಲಕ ಮಾಡುತ್ತೇವೆ ಎಂದು ಮೊದಲೇ ತಿಳಿಸಿದ್ದರು. ನ್ಯಾಯಾಲಯ ಹೋರಾಟವನ್ನು ಶಾಂತಿಯುತವಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ ಹೋರಾಟಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಸ್ಥಳಕ್ಕೆ ಮಹದೇವಪ್ಪ ಸೇರಿದಂತೆ ಮೂರು ಸಚಿವರನ್ನು ಕಳುಹಿಸಿದ್ದೆವು ಎಂದು ಸಿಎಂ ವಿವರಣೆ ನೀಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ