ಸರ್ಕಾರಿ ಆಸ್ಪತ್ರೆಯ ರೋಗಿಗಳು ಖಾಸಗಿ ಆಸ್ಪತ್ರೆಗೆ ಶಿಫ್ಟ್ ನ ಹಿಂದೆ ಕಮಿಷನ್ ದಂಧೆಯ ಕರಿನೆರಳು: ಹಾಸನದ ಯುವ ಮುಖಂಡ ಪ್ರದೀಪ್ ಕಿಡಿ - Mahanayaka

ಸರ್ಕಾರಿ ಆಸ್ಪತ್ರೆಯ ರೋಗಿಗಳು ಖಾಸಗಿ ಆಸ್ಪತ್ರೆಗೆ ಶಿಫ್ಟ್ ನ ಹಿಂದೆ ಕಮಿಷನ್ ದಂಧೆಯ ಕರಿನೆರಳು: ಹಾಸನದ ಯುವ ಮುಖಂಡ ಪ್ರದೀಪ್ ಕಿಡಿ

pradeep
28/09/2023

ರಾಜ್ಯದಲ್ಲಿ ‘108’ ಆ್ಯಂಬುಲೆನ್ಸ್ ಜನರ ಅತ್ಯಂತ ನಂಬಿಕಸ್ಥ ವೈದ್ಯಕೀಯ ವ್ಯವಸ್ಥೆಯಾಗಿದೆ. ಎಲ್ಲಿ ಯಾವುದೇ ಆರೋಗ್ಯ ತುರ್ತು ಸ್ಥಿತಿ ಇದ್ದರೂ, ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನ ತಲುಪಿಸಿ, ಅವರ ಜೀವ ಉಳಿಸುವ ಪುಣ್ಯದ ಕಾರ್ಯವನ್ನು ಆ್ಯಂಬುಲೆನ್ಸ್ ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ, ಹಾಸನ ಜಿಲ್ಲೆಯಲ್ಲಿ ‘108’ ಆ್ಯಂಬುಲೆನ್ಸ್ ಸಿಬ್ಬಂದಿಯ ನಡೆಯ ಬಗ್ಗೆ ತೀವ್ರ ಆತಂಕಕ್ಕೊಳಗಾಗುವ ವಿಚಾರವೊಂದು ಕೇಳಿ ಬಂದಿದೆ.

ಹೌದು..! 108 ಆ್ಯಂಬುಲೆನ್ಸ್ ನಲ್ಲಿ ಕರೆತರುವ ರೋಗಿಗಳನ್ನು ಕಮಿಷನ್ ಆಸೆಗೆ ಆ್ಯಂಬುಲೆನ್ಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಸೇರಿಸುತ್ತಿದ್ದಾರೆ ಎಂದು ಹಾಸನದ ಯುವ ಮುಖಂಡ ಪ್ರದೀಪ್ ಅವರು ಗಂಭೀರ ಆರೋಪ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿದ ವ್ಯಕ್ತಿಗಳು ರೋಗಿಗಳ ಬ್ರೈನ್ ವಾಶ್ ಮಾಡಿ, ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುತ್ತಿರುವ ಘಟನೆಗಳು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ದರೆ 15ರಿಂದ 20% ಕಮಿಷನ್ ಸಿಗುತ್ತದೆ ಎನ್ನುವ ಆಸೆಗೆ ಬಡ ರೋಗಿಗಳನ್ನ ವ್ಯವಸ್ಥಿತವಾಗಿ ಸುಳ್ಳು ಹೇಳಿ ವಂಚಿಸಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಲಾಗುತ್ತಿದೆ. ಕಮಿಷನ್ ಆಸೆಗೆ ಬಲಿಯಾಗಿರುವ ಕೆಲವು ಆ್ಯಂಬುಲೆನ್ಸ್ ಸಿಬ್ಬಂದಿ ರೋಗಿಗಳನ್ನು ಹಾದಿ ತಪ್ಪಿಸಿ, ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ, ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ ಎಂಬಂತೆ ರೋಗಿಗಳ ಕುಟುಂಬಸ್ಥರನ್ನು ಹೆದರಿಸಿ ರೋಗಿಗಳನ್ನು ಖಾಸಗಿ ಆಸ್ಪತ್ರೆ ಸೇರಿಸಲಾಗುತ್ತಿದೆ ಎಂದು ಪ್ರದೀಪ್ ತಿಳಿಸಿದರು.

ಖಾಸಗಿ ಆಸ್ಪತ್ರೆ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆಯಲ್ಲೇನು ಕೆಲಸ?

ಹಾಸನದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಾದ ಇಬ್ಬರು ಎಂಬವರು ಸರ್ಕಾರಿ ಆಸ್ಪತ್ರೆಯಲ್ಲೇ ಬೆಳಗ್ಗಿನಿಂದ ಸಂಜೆಯವರೆಗೂ ಕಾಯುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ, ಇಲ್ಲಿ ಸರಿಯಾಗಿ ಚಿಕಿತ್ಸೆ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ ನಿಮಗೆ ಒಳ್ಳೆಯ ಚಿಕಿತ್ಸೆ ಕೊಡುತ್ತಾರೆ ಎಂದು ಬ್ರೈನ್ ವಾಶ್ ಮಾಡಿ, ರೋಗಿಗಳನ್ನ ಖಿನ್ನತೆಗೆ ಒಳಪಡಿಸಿ ಸರ್ಕಾರಿ ಆಸ್ಪತ್ರೆಯಿಂದ ರೋಗಿಗಳನ್ನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತಿದ್ದಾರೆ. ಇದರ ಬಗ್ಗೆ ನಮ್ಮ ಬಳಿ ದಾಖಲೆ ಇದೆ ಎಂದು ಪ್ರದೀಪ್ ಹೇಳಿದರು.

ಸರ್ಕಾರಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?

ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಮಾನಸಿಕವಾಗಿ ಕುಗ್ಗಿಸಿ, ಸರ್ಕಾರಿ ಆಸ್ಪತ್ರೆಯ ಗುಣಮಟ್ಟದ ಬಗ್ಗೆ ಅಪಪ್ರಚಾರ ಮಾಡುತ್ತಾ ತಿರುಗುತ್ತಿರುವ ಇಬ್ಬರು ವ್ಯಕ್ತಿಗಳ ಬಗ್ಗೆ ಆಸ್ಪತ್ರೆಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಈ ವಿಚಾರ ತಿಳಿದಿಲ್ಲವೇ? ಅಥವಾ ತಿಳಿದರೂ ತಿಳಿಯದಂತಿದ್ದಾರೆಯೇ? ಈ ಬಗ್ಗೆ ತಕ್ಷಣವೇ ಆರೋಗ್ಯ ಇಲಾಖೆ ಗಮನ ಹರಿಸಬೇಕಿದ್ದು, ಜನರಿಗೆ ಉಪಯೋಗವಾಗಿರುವ ಸರ್ಕಾರಿ ಆಸ್ಪತ್ರೆ, ಕಮಿಷನ್ ನುಂಗಣ್ಣಗಳ ಅವ್ಯವಹಾರದ ಅಡ್ಡೆಯಾಗದಂತೆ ರಕ್ಷಿಸಬೇಕಿದೆ. 108 ಆ್ಯಂಬುಲೆನ್ಸ್ ಗಳು ರಾಜ್ಯಾದ್ಯಂತ ಜನರ ನಂಬಿಕೆಗೆ ಪಾತ್ರವಾಗಿದೆ. ಇಂತಹ ಉತ್ತಮ ವ್ಯವಸ್ಥೆಗೆ ಕಪ್ಪುಚುಕ್ಕೆ ಬೀಳದಂತೆ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಪ್ರದೀಪ್ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ