ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿರುವ ಸರ್ಕಾರ: ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ. ಮಂತ್ರಿ ಪಟ್ಟ ಸಿಗದ ಶಾಸಕರಿಗೆ ದುಡ್ಡು ಮಾಡಿಕೊಡಲು ತರಾತುರಿಯಲ್ಲಿ ಸಭೆ ಕರೆದು ಹಲವು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ದುಡ್ಡು ಮಾಡಿಕೊಳ್ಳುವ ಉದ್ದೇಶದಿಂದ ತರಾತುರಿನಲ್ಲಿ ಕೆಬಿಜೆಎಲ್, ವಿಶ್ವೇರಯ್ಯ ನೀರಾವರಿ ನಿಗಮ, ಕರ್ನಾಟಕ ನೀರಾವರಿ ನಿಗಮದಲ್ಲಿ ಸಭೆಯನ್ನು ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ, ಇದರಲ್ಲಿ ಪಾರದರ್ಶಕತೆ ಇಲ್ಲ. ಟೆಂಡರ್ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಜನಜನಿತವಾಗಿರುವ 40% ಕಮಿಷನ್ ನ ಮುಂದುವರೆದ ಭಾಗವಿದು. ಟೆಂಡರ್ ಹಣವನ್ನು ಹೆಚ್ಚು ಮಾಡಿದ್ದಾರೆ, ಯಾರು ಹೆಚ್ಚು ಕಮಿಷನ್ ನೀಡುತ್ತಾರೆ ಅವರಿಗೆ ಕಾಮಗಾರಿ ಕೊಡುತ್ತಿದ್ದಾರೆ, ತಮಗೆ ಬೇಕಾದ ಗುತ್ತಿಗೆದಾರರನ್ನು ಹುಡುಕಿ ಕೆಲಸ ನೀಡುತ್ತಿದ್ದಾರೆ. ಹೀಗೆ ಮಾಡಿ ಕಮಿಷನ್ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾವು ತನಿಖಾ ಆಯೋಗ ರಚನೆ ಮಾಡಿ ಎಲ್ಲವನ್ನೂ ತನಿಖೆ ಮಾಡಿಸಿ, ಯಾರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ ಎಂದು ಸರ್ಕಾರಕ್ಕೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಇದಕ್ಕೆ ಪೂರಕವಾಗಿ ಗೂಳಿಹಟ್ಟಿ ಶೇಖರ್ ಅವರು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕೆಬಿಜೆಎನ್’ಎಲ್, ವಿಜಿಜೆಎಎನ್’ಎಲ್, ಕೆಎನ್’ಎನ್’ಎಲ್ ಹೀಗೆ ಹಲವು ನೀರಾವರಿ ನಿಗಮಗಳಲ್ಲಿ ಅಕ್ರಮವಾಗಿ ನಡವಳಿಕೆಗಳನ್ನು ಮಾಡಿಕೊಂಡು ಒಂದೇ ದಿನ ಸುಮಾರು 18,000 ಕೋಟಿಗೆ ನೀಡಿರುವ ಟೆಂಡರ್, ವರ್ಕ್ ಆರ್ಡರ್ ಗೆ ನೀಡಿರುವ ರದ್ದುಪಡಿಸಿ ಮರು ಟೆಂಡರ್ ಗೆ ಆದೇಶ ನೀಡಿರುವುದನ್ನು ರದ್ದು ಮಾಡಬೇಕು ಎಂದು ಪತ್ರ ಬರೆದಿದ್ದಾರೆ. ಪ್ರತೀ ಓಟಿಗೆ 6000 ರೂ. ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇಂಥ ಕೆಟ್ಟ ರಾಜಕೀಯವನ್ನು ನಾನು ಎಂದೂ ನೋಡಿರಲಿಲ್ಲ ಎಂದು ಹೇಳಿದರು.
ಇಂತಹ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಬಂದಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಈ ಸರ್ಕಾರದ ಮುಖ್ಯಸ್ಥರು. ಅವರ ಕಚೇರಿಯಿಂದಲೇ ಇವೆಲ್ಲ ಆರಂಭವಾಗುವುದು. ನಿಗಮಗಳ ಬೋರ್ಡ್ ಮೀಟಿಂಗ್ ಗಳು ನಡೆಯುವುದು ಅವರ ಅಧ್ಯಕ್ಷತೆಯಲ್ಲಿಯೇ. ಟೆಂಡರ್ ಕರೆದು ಅದರ ಮೊತ್ತವನ್ನು ಇವರೇ ಹೇಳಿಕೊಟ್ಟು ಹೆಚ್ಚು ಮಾಡಿಸಿ, ಲಂಚವನ್ನು ಪಡೆಯುತ್ತಿದ್ದಾರೆ ಎಂದು ಆಪಾದಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw