ಗ್ರಾಮ ಪಂಚಾಯತ್  ಮಹಿಳಾ ಅಭ್ಯರ್ಥಿಯ  ಬ್ಯ್ಲಾಕ್ ಮೇಲ್ ಪ್ರಣಾಳಿಕೆ ಕಂಡು  | ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು - Mahanayaka
11:03 AM Thursday 12 - December 2024

ಗ್ರಾಮ ಪಂಚಾಯತ್  ಮಹಿಳಾ ಅಭ್ಯರ್ಥಿಯ  ಬ್ಯ್ಲಾಕ್ ಮೇಲ್ ಪ್ರಣಾಳಿಕೆ ಕಂಡು  | ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು

20/12/2020

ಗ್ರಾಮ ಪಂಚಾಯತ್  ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳಾ ಅಭ್ಯರ್ಥಿಯೋರ್ವರು ಬಿಡುಗಡೆಗೊಳಿಸಿರು ಪ್ರಣಾಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ ಏನು ಮಾಡುತ್ತೇನೆ ಮತ್ತು ಸೋತರೆ ಏನು ಮಾಡುತ್ತೇನೆ ಎಂಬ ಬಗ್ಗೆ ಪ್ರತ್ಯೇಕವಾಗಿ ವಿವರಿಸಿದ್ದಾರೆ.

ಹೆಬ್ಬೂರು ಗ್ರಾಮಪಂಚಾಯತ್ ಸ್ಥಾನದಿಂದ ಸ್ಪರ್ಧಿಸಿರುವ ಅಭ್ಯರ್ಥಿ ಗಂಗಮ್ಮ ಹೆಚ್. ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆ ಇದೀಗ ವ್ಯಾಪಕ ಸುದ್ದಿಯಾಗಿದೆ. ತಮ್ಮ ಪಾದರಕ್ಷೆ ಗುರುತಿಗೆ ಮತ ನೀಡುವಂತೆ ಕೇಳಿರುವ ಅವರು ಗೆದ್ದರೆ ತಾನು ಏನು ಮಾಡುತ್ತೇನೆ ಮತ್ತು ಸೋತರೆ ಏನು ಮಾಡುತ್ತೇನೆ ಎಂಬ ಬಗ್ಗೆ ಪ್ರತ್ಯೇಕವಾಗಿ ಜನರಿಗೆ ಹೇಳಿದ್ದಾರೆ.

 ಗೆದ್ದರೆ ಮಾಡುವ ಕೆಲಸಗಳು:

  •  ಕರೇತಿಮ್ಮರಾಯಸ್ವಾಮಿ ದೇವಸ್ಥಾನದ ದೇವದಾಯ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಖಾತೆ ಮಾಡಿಸುವುದು.

 

  • ಅರಳೀಕಟ್ಟೆ ಕಟ್ಟಿಸುವುದು.

 

  • ಊರಾಚೆಯ ಚಿಕ್ಕಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೇಜಲ್ ವರೆಗೆ ನಕಾಶೆಯಂತೆ ರಸ್ತೆ ಮಾಡಿಸುವುದು.

 

  • ಊರ ಮುಂದೆ ಮಳೆಯ ನೀರು ರಸ್ತೆಗೆ ತೊಂದರೆಯಾಗದಂತೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಭಯ್ಯನ ಗದ್ದೆಯವರೆಗೆ ಸಿಸಿ ಚರಂಡಿ ಮಾಡಿಸುವುದು.

 

  • ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿಸುತ್ತೇನೆ ಎಂದು ಹೇಳಿರುವ ಗಂಗಮ್ಮ ಅವರು, ತನ್ನನ್ನು ಸೋಲಿಸಿದರೆ, ಏನೇನು ಕೆಲಸ ಮಾಡುತ್ತೇನೆ ಎನ್ನುವುದನ್ನೂ ತಮ್ಮ  ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

 

ಸೋತರೆ ಮಾಡುವ ಕೆಲಸಗಳು

 

  • ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರೇಷನ್ ಕಾರ್ಡ್ ರದ್ದು ಮಾಡಿಸುವುದು

 

  • ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ವಿವಿಧ ಯೋಜನೆಗಳ ಹಣವನ್ನು ನಿಲ್ಲಿಸುವುದು.

 

  • ಸರ್ವೇ ನಂ.86ರಲ್ಲಿ ಹಳೆಯ ದಾಖಲೆಯಂತೆ ಸ್ಮಶಾನ ಮಾಡಿಸುವುದು.

 

  • ಕಲ್ಕೆರೆ ಗ್ರಾಮ ಠಾಣಾ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೇ 11 ಕುಟುಂಬಗಳು ಒತ್ತುವರಿ  ಮಾಡಿರುವ ಜಾಗವನ್ನು 1948ರ ಗ್ರಾಮದ ಹೌಸ್ ಲಿಸ್ಟ್ ನಂತೆ ತೆರವುಗೊಳಿಸಲು ಹೋರಾಟ ಮಾಡುವುದು.

ಗಂಗಮ್ಮ ಅವರ ಈ ಪ್ರಣಾಳಿಕೆ ಇದೀಗ ನೆಟ್ಟಿಗರಿಗೆ ಹಾಸ್ಯದ ವಸ್ತುವಾಗಿ ಪರಿಣಮಿಸಿದೆ. ಜೊತೆಗೆ ಇದೊಂದು ಪಕ್ಕಾ ಬ್ಲ್ಯಾಕ್ ಮೇಲ್ ಪ್ರಣಾಳಿಕೆ ಎಂದು ಜನರು ಹೇಳುತ್ತಿದ್ದಾರೆ. ಇನ್ನೊಂದೆಡೆ ಬಹಳ ಬುದ್ಧಿವಂತ ಮಹಿಳೆ, ಸತ್ಯವನ್ನೇ  ಹೇಳಿದ್ದಾರೆ ಎನ್ನುವಂತಹ ಅಭಿಪ್ರಾಯಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ