ಅಜ್ಜಿ ಮತ್ತು ನೂರು ರೂಪಾಯಿ - Mahanayaka
12:26 AM Saturday 18 - January 2025

ಅಜ್ಜಿ ಮತ್ತು ನೂರು ರೂಪಾಯಿ

grandmother and a hundred rupees
04/02/2023

  • ಧಮ್ಮ ಪ್ರಿಯಾ, ಬೆಂಗಳೂರು

ನನ್ನ ಮುಂದೆ ನಡೆದ  ನೈಜ ಘಟನೆ ನಿಮ್ಮ ಮುಂದಿಡುತಿದ್ದೇನೆ. ನಾನು ಕೆಂಗೇರಿ  ಪೊಲೀಸ್ ಸ್ಟೇಷನ್ ಮುಂದೆ ಮಂಡ್ಯಗೆ ಹೋಗಲು ಬಸ್ಸಿಗಾಗಿ ಕಾಯುತ್ತ ನಿಂತಿರಬೇಕಾದರೆ  ಕೆಂಗೇರಿಯಿಂದ ಬಿಡದಿ ಕಡೆಗೆ ಹೋಗುತಿದ್ದ  ಒಂದು ಸಣ್ಣ TVS ಬೈಕಿನ  ಸವಾರನ ಜೇಬಿನಿಂದ ಅದೇಗೋ ನೂರು ರೂಪಾಯಿಯ  ನೋಟೊಂದು ನನ್ನ ಮುಂದೆ ಕೆಳಗೆ ಬಿದ್ದಿತು ,  ವಾಹನಗಳ ಸಾಲು ಸಾಲು ಬರುವಿಕೆಯಿಂದ ಆ ನೋಟನ್ನು ತೆಗೆದುಕೊಳ್ಳಲು ನಾನು ಹರಸಾಹಸ ಪಟ್ಟು ಕೊನೆಗೂ ಆ ನೋಟನ್ನು ತೆಗೆದುಕೊಂಡೆ  ಅಬ್ಬಾ ಇಂದು ನನಗೆ ಹೇಗಿದ್ದರೂ ಕಾರಿನಲ್ಲಿ ಹೊರಟರೆ 100 ರೂ  ತೆಗೆದುಕೊಳ್ಳುವುದರಿಂದ  ಇದೇ ಹಣವನ್ನು ಕೊಟ್ಟು ಫ್ರೀ ಆಗಿ ಹೋಗಬಹುದು ಎಂದು  ಒಮ್ಮೆ ಯೋಚಿಸಿ ಅಲ್ಲೇ ನಿಂತೇ.

ಸ್ವಲ್ಪಾ ಸಮಯದ ನಂತರ ನನಗೆ ಯಾಕೋ ಮನಸ್ಸಾಗಲಿಲ್ಲಾ. ಪಾಪ ಅವನು ಯಾವ ಉದ್ದೇಶಕ್ಕಾಗಿ  ಈ ಹಣ ಇಟ್ಟುಕೊಂಡಿದ್ದನೋ, ಅದನ್ನು  ಮನೆ ತಲುಪಿದ ನಂತರ ಹುಡುಕಬಹುದು ಎಂದು ಯೋಚಿಸಿದೆ. ಕೊನೆಗೆ ಈ ದುಡ್ಡು ನನ್ನದ್ದಲ್ಲ ಎಂದಾಗ  ನಾನು ಅದನ್ನು ಹೇಗೆ ಬಳಸಲು  ಸಾಧ್ಯ ಎಂದು ಯೋಚಿಸುತ್ತಾ ಕೈಯಲ್ಲೇ ಆ ನೋಟನ್ನು ಹಿಡಿದು ಸಮ್ಮನೆ ನಿಂತೆ. ಕೊನೆಗೆ ಯಾರದರೂ  ವಯಸ್ಸಾದ ಬಡವರಿಗೆ ಈ ಹಣವನ್ನು ಕೊಟ್ಟುಬಿಡೋಣವೆಂದು ಯೋಚಿಸಿದೆ. ಸ್ವಲ್ಪಾ ಸಮಯದ ನಂತರ ಅದೇ ಸ್ಥಳಕ್ಕೆ ಒಂದು ವಯಸ್ಸಾದ ಮುದುಕಿ ಬಂದು ನಿಂತಿತು. ನನಗೆ ಆ ಮುದುಕಿಯನ್ನು ಹೇಗೆ ಮಾತನಾಡಿಸೋದು ಎಂದು ಚಿಂತಿಸಿದೆ. ಕೊನೆಗೂ ಆ ಮುದುಕಿಯನ್ನ ಮಾತನಾಡಿಸಿ ಹಣವನ್ನು ಕೊಡುವಷ್ಟು ಧೈರ್ಯ ಬರಲಿಲ್ಲಾ. ಸ್ವಲ್ಪಾ ಸಮಯದ ನಂತರ ಇನ್ನೊಂದು ಮುದುಕಿ ತನ್ನ  ಕಂಕುಳಲ್ಲಿ ಒಂದು ಚೀಲವನ್ನು ತಬ್ಬಿಕೊಂಡು ಬಂದಿತು.ನಾನು ಅಲ್ಲೇ ನಿಂತು  ಸುಮ್ಮನೆ  ಅತ್ತಾ ಇತ್ತಾ ನೋಡುತಿದ್ದೆ .ಅಜ್ಜಿ ನನ್ನ ಹತ್ತಿರಾ ಬಂದು ಸ್ವಾಮಿ ಪೀಣ್ಯಗೆ ಬಸ್ಸು ಇಲ್ಲೇ ಬರುತ್ತಾ ಎಂದು ಕೇಳಿತು.,ಬರುತ್ತೇ ಇಲ್ಲೇ ಇರಿ ಎಂದೇ. ನಾನು ಸುಮ್ಮನಾಗದೆ ಅಜ್ಜಿ ಯಾವ ಊರು ನಿಮ್ಮದು ಎಂದಾಗ ಅಜ್ಜಿ ನಮ್ಮೂರು ಚಾಮರಾಜನಗರದ ಹತ್ತಿರಾ ಸ್ವಾಮಿ ನನ್ನ ಮಗನ ಮನೆಗೆ ಹೋಗಬೇಕು ಅದಕ್ಕೆ ಬಂದೆ ಅಂದರು. ಮಗ ಏನೂ ಮಾಡುತ್ತಾನೆ ಅಂದಾಗ ಅಜ್ಜಿ ಹೇಳಿದ್ದು ಯಶವಂತಪುರ ಮಾರ್ಕೆಟ್ ನಲ್ಲಿ  ತರಕಾರಿ–ದಿನಸಿ ಮೂಟೆ ಹೊರುವ ಕೆಲಸ ಮಾಡುತ್ತಾನೆ ಅಂದರು.


ADS

ಸುಮ್ಮನಾಗಿ  ನೀನು ಯಾಕೆ ಬಂದೆ ಎಂದಾಗ, ನಮ್ಮ ಯಜಮಾನನಿಗೆ ಉಷಾರಿಲ್ಲಾ ಕಣಪ್ಪಾ ಮಗ ಸೊಸೆಗೆ ಕೇಳಿದೆ 1000/ ದುಡ್ಡು ಬೇಕು ಅಂತಾ ಅದಕ್ಕೆ ಅವರು  ನೀನೇ ಬಂದುಬಿಡು ಕೊಡುತ್ತೇನೆ ಅಂದರು. ಅದಕ್ಕೆ ಬಂದೆ ಕಣಪ್ಪಾ ಅಂದರು , ಒಂದು ಸಾವಿರ ರೂಪಾಯಿಗೆ ಅಜ್ಜಿ ಸುಮಾರು 150 ರಿಂದ 200 ಕಿಲೋ ಮೀಟರ್ ಬಂದಿದ್ದಾರಾ !!! ಅದು ಈ ದೊಡ್ಡ ನಗರಕ್ಕೆ ಬಂದಿದೆಯಲ್ಲಾ ಪಾಪ  ಜನಗಳು ಇನ್ನೂ ಎಷ್ಟು ಕಷ್ಟ ಪಡುತಿದ್ದಾರೆ ಅನಿಸಿ,ಅಜ್ಜಿ ಬಸ್ ಚಾರ್ಜ್ ಗೆ ಏನೂ ಮಾಡಿದೆ ಬರುವಾಗ ಎಂದೆ, ಏನೋ ಮಾಡಿ ಬೇರೆಯವರ ಹತ್ತಿರಾ ಸಾಲ ತಕೊಂಡು ಬಂದೆ , ಹೋದ ತಕ್ಷಣ ಕೊಡಬೇಕು ಅಂದರು , ನಾನು ಈ 100/ ರೂಪಾಯಿ ಇಂತಹವರಿಗೆ 1000/ ರೂಪಾಯಿಗೆ ಸಮವೆಂದು ತಿಳಿದು , ಅಜ್ಜಿ ನನ್ನ ತಪ್ಪಾಗಿ ತಿಳಿಬೇಡ  ನಾನು ಒಬ್ಬ ಬಡತನದ ಕುಟುಂಬದಲ್ಲಿ ಬಂದವನು  ಈ ನೂರು ರೂಪಾಯಿ ನನಗೆ ಇಲ್ಲಿ ಸಿಕ್ಕಿತು  ಇದು ನಿಮಗೆ ಉಪಯೋಗವಾಗಲಿ ತಕೊ ಅಂತಾ ಅಜ್ಜಿಗೆ ಕೊಟ್ಟುಬಿಟ್ಟೆ.

ಮಗ ನಿಮ್ಮಂತಹ  ಮಕ್ಕಳಿದ್ದರೆ ಅದೇ ಅಪ್ಪಾ ಅಮ್ಮನ ಅಸ್ತಿ,  ನಿನಗೆ ಒಳ್ಳೆಯದಾಗಲಿ. ನಿಮ್ಮ ತಂದೆ ತಾಯಿ ಪುಣ್ಯ ಮಾಡಿದ್ದರು ಕಣಪ್ಪಾ , ಅವರು ಇನ್ನೂ ನೂರ್ಕಾಲ ಚೆನ್ನಾಗಿರಲಿ , ನೀನು ನಿನ್ನ ಕುಟುಂಬ ಚೆನ್ನಾಗಿರಲಿ ಎಂದು ಹೇಳಿ ಕೈ ಮುಗಿದಳು , ನನಗೆ ಕ್ಷಣಕಾಲ ಮಾತು ಬರದಾಯಿತು ಕಣ್ಣುಗಳು ಒದ್ದೆಯಾದವು ಯಾಕೆಂದರೆ ನನ್ನ ತಂದೆ ತಾಯಿಯ ಸೇವೆ ಮಾಡುವ ಪುಣ್ಯ ನನಗೆ ಸಿಗಲಿಲ್ಲಾ  ಅವರಿಬ್ಬರೂ ಆಗಲೇ ನನ್ನನ್ನು ಅಗಲಿದ್ದರು , ನನ್ನ ಸಂಪಾದನೆಯಲ್ಲಿ ಅವರು ಒಂದು ದಿನವಾದರೂ  ಸುಖ ಪಡಲಿಲ್ಲ ಅದು ನನ್ನನ್ನು ಈಗಲೂ ಬಾಧಿಸುತ್ತಿದೆ.

ಆ ಕಾರಣದಿಂದಲೇ ನಾನು ಇಂದಿಗೂ ವಯಸ್ಸಾದವರನ್ನು ಕಂಡಾಗ ಇವರು ನನ್ನ ತಂದೆ ತಾಯಿಯ ಪ್ರತಿರೂಪವಿರಬೇಕು ಎಂದು ಭಾವಿಸಿ ಅವರಿಗೆ ನನ್ನ ಕೈಲಾದ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ನಮ್ಮ  ಸಂಪಾದನೆಯೇ ನಮ್ಮ ಕೈಬಿಡುತ್ತಿರುವಾಗ ಬೇರೆಯವರ ಶ್ರಮದ ಪ್ರತಿಫಲವನ್ನು ನಾವು ಅನುಭವಿಸಬಾರದು ಅದು ಇನ್ನೊಂದು ಕಷ್ಟದಲ್ಲಿರುವ ವ್ಯಕ್ತಿಗೆ ಸಹಾಯವಾದರೆ ಸಾಕು , ಅದರಿಂದ ನನಗೆ ಸಿಗುವ ನೆಮ್ಮದಿ ಸಂತೋಷಕ್ಕೆ   ಮಿತಿಯೇ ಇಲ್ಲಾ.

ಸ್ನೇಹಿತರೆ ದಯಮಾಡಿ ಇನ್ನೊಬ್ಬರ ಶ್ರಮದ ಪ್ರತಿಪಲಕ್ಕೆ ಎಂದೂ ಆಸೆ ಪಡಬೇಡಿ  , ನೀವು ಕಷ್ಟಪಟ್ಟು ದುಡಿದು ಸಂಪಾದಿಸಿ ಅದರಲ್ಲೇ ನೆಮ್ಮದಿಯಾಗಿ ನಿಮ್ಮ ಜೀವನ ನಡೆಸಿ. ಇಲ್ಲಿ ನಮ್ಮದು ಎನ್ನುವುದು ಯಾವುದೂ ಇಲ್ಲಾ  ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ .  ದಯವಿಟ್ಟು  ನಿಜ ಜೀವನ ನಡೆಸಿ  ದುಷ್ಟ ಚಟಗಳಿಗೆ ಬಲಿಯಾಗಬೇಡಿ  ಹಿರಿಯರನ್ನೂ ಗೌರವಿಸಿ ತಂದೆ ತಾಯಿಯನ್ನು ನಿಮ್ಮ ಮಕ್ಕಳನ್ನೂ ಪ್ರೀತಿಸುವ ಹಾಗೆ ಪ್ರೀತಿಸಿ. ಅವರನ್ನೂ ಸದಾ ಖುಷಿಯಾಗಿರಿಸಿ, ಅದರಿಂದ ಸಿಗುವ ಆನಂದವೇ ಬೇರೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ