ಮೊಟ್ಟೆ ಮಾರಾಟಗಾರ, ಜ್ಯೂಸ್ ಮಾರಾಟಗಾರರಿಗೆ ಕೋಟಿಗಟ್ಟಲೆ ಜಿಎಸ್ ಟಿ ನೋಟಿಸ್!: ನೋಟಿಸ್ ನೋಡಿ ಬೆಚ್ಚಿಬಿದ್ದ ಕುಟುಂಬ

ದಾಮೋಹ್/ಅಲಿಗಢ: ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಮೊಟ್ಟೆ ಮಾರಾಟಗಾರ ಮತ್ತು ಜ್ಯೂಸ್ ಮಾರಾಟಗಾರರಿಗೆ ಆದಾಯ ತೆರಿಗೆ (ಐ-ಟಿ) ಇಲಾಖೆಯಿಂದ ಕೋಟ್ಯಂತರ ರೂಪಾಯಿಗಳ ಜಿಎಸ್ ಟಿ ಬಾಕಿ ಉಳಿದಿರುವಂತೆ ನೋಟಿಸ್ ಬಂದಿದ್ದು, ನೋಟಿಸ್ ನೋಡಿ ಬಡ ಕುಟುಂಬದ ಈ ವ್ಯಕ್ತಿಗಳು ಶಾಕ್ ಗೊಳಗಾಗಿದ್ದಾರೆ.
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ, ಮೊಟ್ಟೆ ಮಾರಾಟಗಾರ ಪ್ರಿನ್ಸ್ ಸುಮನ್ ಅವರಿಗೆ 50 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದೀರಿ, ಜಿಎಸ್ ಟಿ 6 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದೀರಿ ಎಂದು ನೋಟಿಸ್ ನೀಡಲಾಗಿದೆ.
ಸುಮನ್ ಅವರ ಹೆಸರಿನಲ್ಲಿ ದೆಹಲಿಯ ರಾಜ್ಯ ವಲಯ 3, ವಾರ್ಡ್ 33 ರಲ್ಲಿ ಪ್ರಿನ್ಸ್ ಎಂಟರ್ ಪ್ರೈಸಸ್ ಎಂಬ ಕಂಪೆನಿ ನೋಂದಾಯಿಸಲ್ಪಟ್ಟಿದ್ದು, ಈ ಸಂಸ್ಥೆ ಹೆಸರಿನಲ್ಲಿ ಚರ್ಮ, ಮರ ಮತ್ತು ಕಬ್ಬಿಣದ ವ್ಯಾಪಾರ ನಡೆಸಲಾಗಿದೆ. ಕೇವಲ 2 ವರ್ಷಗಳಲ್ಲಿ ಬೃಹತ್ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ವಾಸ್ತವವಾಗಿ ಪಥಾರಿಯಾ ನಗರದಲ್ಲಿ ವಾಸಿಸುತ್ತಿರುವ ಸುಮನ್ ಗಾಡಿಗಳಲ್ಲಿ ಮೊಟ್ಟೆ ಮಾರಾಟ ಮಾಡುವ ಸುಮನ್, ತಾನು ದೆಹಲಿಗೆ ಹೋಗಿಲ್ಲ, ಅಲ್ಲಿ ಕಂಪೆನಿಯೂ ಆರಂಭಿಸಿಲ್ಲ ಎಂದಿದ್ದಾರೆ. ಕೋಟಿಗಟ್ಟಲೆ ವ್ಯವಹಾರ ನಡೆಸುವುದಾಗಿದ್ದರೆ, ತಾನೇಕೆ ದೈನಂದಿನ ಖರ್ಚುಗಳನ್ನು ಪೂರೈಸಲು ಮೊಟ್ಟೆ ಮಾರಾಟ ಮಾಡಿಕೊಂಡು ಕಷ್ಟಪಡಬೇಕಿತ್ತು ಎಂದು ಸುಮನ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಮನ್ ಅವರ ವಕೀಲರು ಸುಮನ್ ಅವರ ವೈಯಕ್ತಿಕ ದಾಖಲೆಗಳನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳು ಹಾಗೂ ತೆರಿಗೆ ಅಧಿಕಾರಿಗಳನ್ನ ಸಂಪರ್ಕಿಸಿರುವುದಾಗಿ ಅವರು ತಿಳಸಿದ್ದಾರೆ.
ಇಂತಹದ್ದೇ ಇನ್ನೊಂದು ಪ್ರಕರಣ:
ಉತ್ತರ ಪ್ರದೇಶದ ಅಲಿಗಢದ ಜ್ಯೂಸ್ ಮಾರಾಟಗಾರ ಎಂ.ಡಿ. ರಹೀಸ್ ಅವರಿಗೆ 7.5 ಕೋಟಿ ರೂ.ಗಳಿಗೂ ಹೆಚ್ಚು ಐಟಿ ನೋಟಿಸ್ ಬಂದಿದ್ದು, ಈ ನೋಟಿಸ್ ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಈ ನೋಟಿಸ್ ಏಕೆ ನೀಡಲಾಗಿದೆ ಎಂದು ನನಗೆ ತಿಳಿದಿಲ್ಲ. ನಾನು ಜ್ಯೂಸ್ ಮಾತ್ರ ಮಾರಾಟ ಮಾಡುತ್ತೇನೆ. ನಾನು ಇಷ್ಟೊಂದು ಹಣವನ್ನು ಎಂದಿಗೂ ನೋಡಿಲ್ಲ. ಈಗ ನಾನು ಏನು ಮಾಡಬೇಕು?” ರಹೀಸ್ ಪ್ರಶ್ನಿಸಿದ್ದಾರೆ.
“ನನಗೆ ಸಹಾಯ ಮಾಡುವಂತೆ ನಾನು ಸರ್ಕಾರವನ್ನು ವಿನಂತಿಸುತ್ತೇನೆ. ನಾನು ಬಡವ. ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಾರದು” ಎಂದು ಅವರು ಹೇಳಿದರು.
ನೋಟಿಸ್ನಲ್ಲಿ 2020–21ರಲ್ಲಿ ಅವರ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ “ನಕಲಿ” ವಹಿವಾಟುಗಳನ್ನು ತೋರಿಸಲಾಗಿದೆ. ಸರ್ಕಾರದ ಜಿಎಸ್ ಟಿಗೆ 7,79,02,457 ರೂ. ಬಾಕಿ ಉಳಿಸಿಕೊಂಡಿರುವುದಾಗಿ ತೋರಿಸಲಾಗಿದೆ.
ನಾವು ಐಟಿ ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆ ಅವರು ನನ್ನ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಂಡಿದ್ದೀರಾ ಎಂದು ಕೇಳಿದರು. ನಾನು ಅವುಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ನಾನು ಹೇಳಿದೆ ಎಂದು ಬನ್ನಾ ದೇವಿ ಪೊಲೀಸ್ ಠಾಣೆ ವ್ಯಾಪ್ತಿಯ ತಾರ್ ವಾಲಿ ಗಲಿಯಲ್ಲಿ ವಾಸಿಸುವ ರಹೀಸ್ ಹೇಳಿದರು.
ನಾವು ನಮ್ಮ ದಿನನಿತ್ಯದ ಊಟಕ್ಕೂ ಕಷ್ಟಪಡುತ್ತಿದ್ದೇವೆ… ನಮ್ಮ ಬಳಿ ಅಷ್ಟು ಹಣವಿದ್ದರೆ, ನಮ್ಮ ಮಗ ಏಕೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತಿತ್ತು? ಎಂದು ರಹೀಸ್ ಅವರ ತಾಯಿ ಪ್ರಶ್ನಿಸಿದರು.
2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಕೋಟ್ಯಂತರ ರೂಪಾಯಿಗಳನ್ನು ದೇಣಿಗೆ ನೀಡಲು ರಹೀಸ್ ಅವರ ವೈಯಕ್ತಿಕ ದಾಖಲೆಗಳನ್ನು ವಂಚನೆಯಿಂದ ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ರಹೀಸ್ ಕೋಟ್ಯಾಧಿಪತಿಯಾಗಿದ್ದರೆ, ಅವರು ಜ್ಯೂಸ್ ಅಂಗಡಿ ನಡೆಸುತ್ತಿದ್ದರು? ಇದು ಖಂಡಿತವಾಗಿಯೂ ವಂಚನೆಯ ಪ್ರಕರಣವಾಗಿದೆ ಎಂದು ಜ್ಯೂಸ್ ಮಾರಾಟಗಾರನ ಸ್ನೇಹಿತ ಸೊಹೈಲ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: