ಗುಡಿಸಲಿಗೆ ಬೆಂಕಿ 60ಕ್ಕೂ ಅಧಿಕ ಕುರಿ, ಮೇಕೆಗಳು ಸುಟ್ಟು ಭಸ್ಮ!
ಚಿಕ್ಕಬಳ್ಳಾಪುರ: ಜೀವನಾಧಾರವಾಗಿದ್ದ 60ಕ್ಕೂ ಅಧಿಕ ಕುರಿ-ಮೇಕೆ-ಜಾನುವಾರುಗಳು ಸಜೀವವಾಗಿ ದಹಿಸಿದ ದಾರುಣ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೂಲಮಾಕಲಹಳ್ಳಿಯಲ್ಲಿ ನಡೆದಿದೆ.
ಗಂಗಾಧರಪ್ಪ ಹಾಗೂ ತುಳಸಮ್ಮ ದಂಪತಿ ಇದೀಗ ತಮ್ಮ ಜೀವನಾಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ನಿನ್ನೆ ಸಂಜೆ ಹುಲ್ಲಿನ ಮನೆಯಲ್ಲಿ ಜಾನುವಾರುಗಳನ್ನು ಗಂಗಾಧರಪ್ಪ ಹಾಕಿ ಹೋಗಿದ್ದರು. ಆದರೆ, ಆಕಸ್ಮಿಕವಾಗಿ ಬೆಂಕಿ ತಗಲಿತೋ ಅಥವಾ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೋ ತಿಳಿದು ಬಂದಿಲ್ಲ. ಜಾನುವಾರುಗಳ ಜೊತೆಗೆ ಇಡೀ ಗುಡಿಸಲು ಸುಟ್ಟು ಭಸ್ಮವಾಗಿದೆ.
ಗಂಗಾಧರಪ್ಪ ಕುಟುಂಬಕ್ಕೆ ಜಾನುವಾರುಗಳೇ ಬದುಕಾಗಿದ್ದು, ಸಾಲ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಮೊದಲಾದ ಕಾರಣಗಳಿಗಾಗಿ ಜಾನುವಾರುಗಳನ್ನು ಸಾಕುತ್ತಿದ್ದರು. ಆದರೆ ಇದೀಗ ಅವರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಇನ್ನೂ ಘಟನಾ ಸ್ಥಳಕ್ಕೆ ಶಾಸಕ ಶಿವಶಂಕರರೆಡ್ಡಿ ಭೇಟಿ ನೀಡಿದ್ದು, ನೊಂದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದು, ಸರ್ಕಾರದಿಂದ ಬರುವ ಯೋಜನೆಗಳ ಜೊತೆಗೆ ಇತರ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದಾರೆ.