ಎಎನ್ ಎಫ್—ನಕ್ಸಲರ ನಡುವೆ ಗುಂಡಿನ ಕಾಳಗ: ನಕ್ಸಲ್ ಮುಖಂಡ ವಿಕ್ರಂ ಗೌಡ ಸಾವು
ಉಡುಪಿ: ಎ.ಎನ್.ಎಫ್ ಹಾಗೂ ನಕ್ಸಲರ ನಡುವಿನ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಸಾವನ್ನಪ್ಪಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀತಬೈಲುವಿನಲ್ಲಿ ಈ ಘಟನೆ ನಡೆದಿದೆ. ಹೆಬ್ರಿ ಪರಿಸರದಲ್ಲಿ ನಕ್ಸಲ್ ಓಡಾಟದ ಬಗ್ಗೆ ವರದಿಗಳ ಹಿನ್ನೆಲೆ ಎಎನ್ ಎಫ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಸೋಮವಾರ ತಡ ರಾತ್ರಿ 1 ಗಂಟೆಯ ಸುಮಾರಿಗೆ 5 ಮಂದಿ ನಕ್ಸಲರು ರೇಷನ್ ಸಂಗ್ರಹಕ್ಕೆ ಬಂದಿದ್ದಾರೆ. ಈ ವೇಳೆ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಎಎನ್ ಎಫ್ ತಂಡದ ಗುಂಡಿನ ದಾಳಿಗೆ ನಕ್ಸಲ್ ಮುಖಂಡ ಸಾವನ್ನಪ್ಪಿದ್ದಾನೆ. ಉಳಿದ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೀತಬೈಲಿನಲ್ಲಿ ಎರಡು ಮಲೆಕುಡಿಯ ಸಮುದಾಯದ ಮನೆಗಳು ಸೇರಿದಂತೆ ಮೂರು ಮನೆಗಳು ಇವೆ. ಈ ದಟ್ಟ ಕಾಡು ಪ್ರದೇಶಕ್ಕೆ ನಕ್ಸಲರು ರೇಷನ್ ಸಂಗ್ರಹಕ್ಕೆ ಬರುವ ಮಾಹಿತಿಯ ಮೇರೆಗೆ ಎಎನ್ ಎಫ್ ಮಧ್ಯರಾತ್ರಿಯಿಂದಲೇ ಸ್ಥಳದಲ್ಲಿ ಕಾಯುತ್ತಿತ್ತು. ನಕ್ಸಲರು ಆಗಮಿಸುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಲಾಗಿದೆ.
ಈ ಹಿಂದೆ ಶೃಂಗೇರಿ ಸಮೀಪದ ಕಿಗ್ಗದಲ್ಲಿ ವಿಕ್ರಂ ಗೌಡನ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ ವಿಕ್ರಂ ಗೌಡನ ಸಂಬಂಧಿಕರೊಬ್ಬರು ಇದು ವಿಕ್ರಂ ಗೌಡ ಅಲ್ಲ ಎಂದು ಖಚಿತ ಪಡಿಸಿದ್ದರು. ಇದೀಗ ಎಎನ್ ಎಫ್ ದಾಳಿಗೆ ವಿಕ್ರಂ ಗೌಡ ಬಲಿಯಾಗಿದ್ದಾನೆ.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆ ನಕ್ಸಲರು ಭೇಟಿ ನೀಡಿದ ಸುಳಿವು ದೊರೆತಿತ್ತು. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ 3 ಬಂದೂಕುಗಳು ಪತ್ತೆಯಾಗಿದ್ದವು. ಆ ಮನೆಗೆ ನಕ್ಸಲ್ ನಾಯಕಿ ಮುಂಡಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.
ನಂತರ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿರುವ ಅನುಮಾನಗಳು ವ್ಯಕ್ತವಾಗಿವೆ. ಕಳೆದ 15 ದಿನಗಳಿಂದ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಅರಣ್ಯ ಭಾಗದಲ್ಲಿ ಎಎನ್ ಎಫ್ ಕೂಂಬಿಂಗ್ ನಡೆಸುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: