CLAT ಪರೀಕ್ಷೆಯಲ್ಲಿ ಮತ್ತೆ ಮೊದಲ ರಾಂಕ್ ಪಡೆದು ಹ್ಯಾಟ್ರಿಕ್ ಸಾಧನೆಗೈದ ನಂಜನಗೂಡಿನ ಜ್ಞಾನಾಂಕಿತ್ - Mahanayaka
3:29 AM Wednesday 11 - December 2024

CLAT ಪರೀಕ್ಷೆಯಲ್ಲಿ ಮತ್ತೆ ಮೊದಲ ರಾಂಕ್ ಪಡೆದು ಹ್ಯಾಟ್ರಿಕ್ ಸಾಧನೆಗೈದ ನಂಜನಗೂಡಿನ ಜ್ಞಾನಾಂಕಿತ್

gyanankit
27/12/2022

ಮೈಸೂರು: CLAT ಪರೀಕ್ಷೆಯಲ್ಲಿ ಜನರಲ್ ಮೆರಿಟ್ ನಲ್ಲಿ ನಂಜನಗೂಡಿನ ಜ್ಞಾನಾಂಕಿತ್ ಆಲ್ ಇಂಡಿಯಾ 146ನೇ ರಾಂಕ್ ಹಾಗು ಎಸ್ಸಿ ಕೆಟಗರಿಯಲ್ಲಿ ಮೊದಲ Rank ಪಡೆದಿದ್ದು, ಅವರ ಸಾಧನೆಗೆ ಭಾರತೀಯ ವಿದ್ಯಾರ್ಥಿ ಸಂಘ(BVS)ದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದೇಶದಲ್ಲಿ ಇದೊಂದು ಪ್ರತಿಷ್ಠಿತ ಪರೀಕ್ಷೆಯಾಗಿದ್ದು, ಸುಮಾರು 70 ಸಾವಿರ ವಿದ್ಯಾರ್ಥಿಗಳು CLAT ಪರೀಕ್ಷೆ ಬರೆದಿದ್ದರು.ಈ ಪೈಕಿ ನಂಜನಗೂಡಿನ ಜ್ಞಾನಾಂಕಿತ್ ಟಾಪ್ ರಾಂಕ್  ಪಡೆದು ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜ್ಞಾನಾಂಕಿತ್ ಈ ಬಗ್ಗೆ ನನಗೆ ಮೊದಲು ಪ್ರೇರಣೆ ನೀಡಿದವರು ಅಕ್ಕ IAS ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಗುರುಗಳು. ನಾನು 6ನೇ ತರಗತಿಯಲ್ಲಿರುವಾಗ ನನಗೆ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಓದಲು ಸ್ಪೂರ್ತಿ ತುಂಬಿದರು. ನನ್ನ ಮಾವ ಡಾ.ಸುರೇಶ್, ನನ್ನ ತಾಯಿ ಶೈಲಜ ಅವರು ನನ್ನ ಬೆನ್ನಿಗೆ ನಿಂತರು. ಈಗಾಗಲೇ ರಾಜಾಸ್ಥಾನದ ಕಾನೂನು ವಿ.ವಿ.ಯಲ್ಲಿ ಓದುತ್ತಿರುವ ನನ್ನ ದೊಡ್ಡಮ್ಮನ ಮಗ ಗೌತಮ್ ಅಣ್ಣ ನನಗೆ ಗೈಡ್ ಮಾಡಿದರು. ಹೀಗಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕಾನೂನು ಕೊಟ್ಟರು ಎಂದು ಜನ ಹೆಮ್ಮೆ ಪಡುತ್ತಾರೆ. ಆದರೆ ಅವರಂತೆ ಕಾನೂನು ಪಂಡಿತರಾಗಬೇಕು ಅಂತ ಯಾರೂ ಬಯಸುವುದಿಲ್ಲ. ಸರ್ಕಾರಿ ನೌಕರರು ಕೂಡ ತಮ್ಮ ಮಕ್ಕಳನ್ನು ಭಾರತದ ರಾಷ್ಟ್ರೀಯ ಕಾನೂನು ವಿವಿಗಳಲ್ಲಿ ಕಾನೂನು ಓದಲು ಪ್ರೇರೇಪಿಸುವುದಿಲ್ಲ ಎಂದರು.

ಜ್ಞಾನಾಂಕಿತ್ ಬಗ್ಗೆ ಒಂದಿಷ್ಟು ಮಾಹಿತಿ:

ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಞಾನಾಂಕಿತ್ ಜೆ.ಎ.  ಶ್ರೀಮತಿ ಶೈಲಜಾ ಹಾಗೂ ದಿವಂಗತ ಅಂಕಯ್ಯ ದಂಪತಿ ಪುತ್ರರಾಗಿದ್ದಾರೆ. ತಾಯಿ ಶೈಲಜ ಅವರು ನಂಜನಗೂಡು ಹದಿನಾರು ಗ್ರಾಮದ ಪ್ರೌಢ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಅಂಕಯ್ಯ CRPFನಲ್ಲಿದ್ದು, 2005 ರಲ್ಲಿ ನಿಧನರಾಗಿದ್ದಾರೆ. ಜ್ಞಾನಾಂಕಿತ್ ಅವರ ಮಾವ ಡಾ.ಸುರೇಶ್ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿವಿಎಸ್ ವತಿಯಿಂದ ಪ್ರತೀ ವರ್ಷವೂ ಆಯೋಜಿಸಲಾಗುವ ಎಸೆಸೆಲ್ಸಿ ಬಳಿಕ ಮುಂದೇನು? ಹಾಗೂ ಪಿಯುಸಿ ಬಳಿಕ ಮುಂದೇನು? ಎಂಬ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜ್ಞಾನಾಂಕಿತ್ ಕುಟುಂಬ ಭಾಗವಹಿಸುತ್ತಿದೆ. ಡಾ.ಸುರೇಶ್ ಅವರು ಇಂತಹ ಕಾರ್ಯಕ್ರಮಗಳನ್ನು ಸೇವಾ ಮನೋಭಾವದಿಂದ ಸ್ವಂತ ಖರ್ಚಿನಿಂದ ನಡೆಸಿಕೊಟ್ಟಿದ್ದಾರೆ.

ತಾಯಿ ಶೈಲಜ ಎಚ್.ಆರ್.ಅವರ ನೈತಿಕ ಬೆಂಬಲ ಹಾಗೂ ಸ್ವಂತ ಪರಿಶ್ರಮದಿಂದ ಜ್ಞಾನಾಂಕಿತ್ ಕಳೆದ ವರ್ಷವೂ  SC ಪಟ್ಟಿಯಲ್ಲಿ ಮೊದಲ ರಾಂಕ್ ಹಾಗೂ  ಸಾಮಾನ್ಯ ಪಟ್ಟಿಯಲ್ಲಿ  292ನೇ ರಾಂಕ್ ನ್ನು ಪಡೆದುಕೊಂಡಿದ್ದರು. ಈ ವರ್ಷ ಸಾಮಾನ್ಯ ಪಟ್ಟಿಯಲ್ಲಿ 146 ನೇ ಹಾಗೂ ಎಸ್ಸಿ ಪಟ್ಟಿಯಲ್ಲಿ ಮೊದಲ  ರಾಂಕ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಏನಿದು  CLAT ಪರೀಕ್ಷೆ?

ಭಾರತದಲ್ಲಿ ಸುಮಾರು 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿವೆ. ಇದರ ಪ್ರಧಾನ ಕಚೇರಿ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿದೆ. ಇಲ್ಲಿ ಪ್ರವೇಶ ಪಡೆಯಬೇಕಾದರೆ, CLAT (Common Law Admission Test) ಎಂಬ ಪ್ರವೇಶ ಪರೀಕ್ಷೆಯನ್ನು ವಿದ್ಯಾರ್ಥಿಗಳು ಪಾಸು ಮಾಡಬೇಕು. ದ್ವಿತೀಯ ಪಿಯುಸಿ ಮುಗಿದ ವಿದ್ಯಾರ್ಥಿಗಳು ಇದನ್ನು ಬರೆಯಬಹುದು. ಆದರೆ ಪ್ರಥಮ ಪಿಯುಸಿಯಲ್ಲಿದ್ದಾಗಲೇ CLAT ಪರೀಕ್ಷೆಗೆ ತರಬೇತಿ ತೆಗೆದುಕೊಳ್ಳಬೇಕು. ಇದೊಂದು ಪ್ರತಿಷ್ಠಿತ ಪರೀಕ್ಷೆಯಾಗಿದ್ದು, CLAT ಮೂಲಕ ಆಯ್ಕೆಯಾಗಿ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ LLB, LLM ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಗೌರವವಿದೆ. ಇವರು ಹೈಕೋರ್ಟ್ ನ ಹಾಗೂ ಸುಪ್ರೀಮ್ ಕೋರ್ಟ್ ಗಳಲ್ಲಿ ಕೆಲಸ ಮಾಡುವಷ್ಟು ಪ್ರತಿಭಾವಂತರಾಗಿರುತ್ತಾರೆ ಎಂದು ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಡಾ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಡಾ. ಪ್ರೇಮ್ ಕುಮಾರ್,  ಜೆಎಸ್ ಎಸ್ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ.ಶ್ಯಾಮ್ ಪ್ರಸಾದ್, ನಿವೃತ ಶಿಕ್ಷಕರಾದ ರಾಜಣ್ಣ,  ನಿವೃತ್ತ ತಂಬಾಕು ಅಧಿಕಾರಿಗಳಾದ  ಮಂಜುರಾಜ್, ಶಿಕ್ಷಕರಾದ ಗಣೇಶ್, ಹೆಚ್.ಕೆ.ವೀರಣ್ಣ ಕಾಲೇಜಿನ ಪ್ರೊಫೆಸರ್ ಸಂದೀಪ್ ಎಸ್. ರಾವಣಿಕರ್ ಮುಂತಾದವರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ