ಪುನೀತ್ ನಿಧನದ ಬೆನ್ನಲ್ಲೇ ಜಿಮ್ ಗೆ ಹೋಗಲು ಹಿಂದೇಟು ಹಾಕುತ್ತಿರುವ ಯುವಕರು! - Mahanayaka
9:05 AM Thursday 12 - December 2024

ಪುನೀತ್ ನಿಧನದ ಬೆನ್ನಲ್ಲೇ ಜಿಮ್ ಗೆ ಹೋಗಲು ಹಿಂದೇಟು ಹಾಕುತ್ತಿರುವ ಯುವಕರು!

puneeth rajkumar
03/11/2021

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದಿಂದಾಗಿ ಇದೀಗ ಜಿಮ್ ಗೆ ಹೋಗಲು ಯುವಕ, ಯುವತಿಯರು ಹಿಂದೇಟು ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಪುನೀತ್ ರಾಜ್ ಕುಮಾರ್ ಅವರು ಜಿಮ್ ಮಾಡಿದ್ದರಿಂದಾಗಿ ಅವರಿಗೆ ಹೃದಯಾಘಾತವಾಯಿತು ಎನ್ನುವ ಸಂದೇಶ ಹೊರ ಬಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿದೆ ಎಂದು ಹೇಳಲಾಗಿದೆ.

ಪುನೀತ್ ಅವರು ಸದೃಢ ದೇಹಕ್ಕಾಗಿ ವ್ಯಾಯಾಮ ಮಾಡುತ್ತಿದ್ದರು. ಅವರಿಗೇ ಹೃದಯಾಘಾತವಾಗಿರುವುದು ಜನರಿಗೆ ಶಾಕ್ ಆಗಿದೆ. ಈ ನಡುವೆ ಜಿಮ್ ಗೆ ಹೋಗುತ್ತಿದ್ದವರ ಸಂಖ್ಯೆ ಇಳಿಮುಖವಾಗಿದೆ ಎನ್ನಲಾಗುತ್ತಿದ್ದು, ಕಳೆದ 5 ದಿನಗಳಿಂದ ಯುವಕರು ಜಿಮ್ ಕಡೆಗೆ ಹೋಗಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.

ಪುನೀತ್ ನಿಧನದ ಹಿನ್ನೆಲೆಯಲ್ಲಿ ಮೊದಲ ಎರಡು ದಿನ ಜಿಮ್ ಸೆಂಟರ್ ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಆದರೆ ಇದೀಗ ಜಿಮ್ ಓಪನ್ ಆಗಿದ್ದರೂ ಈ ಹಿಂದೆ ಬರುತ್ತಿದ್ದ ಯುವಕರು ಕೂಡ ಜಿಮ್ ಗೆ ಬರುವುದನ್ನು ನಿಲ್ಲಿಸಿರುವುದು ಜಿಮ್ ಮಾಲಿಕರ ಆತಂಕಕ್ಕೆ ಕಾರಣವಾಗಿದೆ.

ಇನ್ನೂ ಯುವಕರ ಪೋಷಕರು ಕೂಡ ಮಕ್ಕಳು ಜಿಮ್ ಗೆ ಹೋಗದಂತೆ ತಡೆಯುತ್ತಿದ್ದಾರೆ ಎನ್ನಲಾಗಿದೆ. ಜಿಮ್ ಗೆ ಹೋದರೂ ಹೆಚ್ಚಿನ ಭಾರ ಎತ್ತಬೇಡ ಎಂಬ ಸಲಹೆಗಳನ್ನು ಕೂಡ ಪೋಷಕರು ನೀಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಕೇರಳದಲ್ಲಿ ಪುನೀತ್ ರಾಜ್ ಕುಮಾರ್ ಅವರ ನಿಧನದ ಬೆನ್ನಲ್ಲೇ ಜಿಮ್ ಸೆಂಟರ್ ಗಳಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸರ್ಕಾರ ಎಚ್ಚರಿಸಿದೆ. ಕರ್ನಾಟಕ ಸರ್ಕಾರ ಇಷ್ಟೊಂದು ಗಂಭೀರ ಚರ್ಚೆಗಳು ನಡೆಯುತ್ತಿದ್ದರೂ, ಜಿಮ್ ಸೆಂಟರ್ ಗಳಿಗೆ ಯುವಕರು ಭಯವಿಲ್ಲದೇ ಹೋಗಲು ಪೂರಕವಾಗಿರುವ ಯಾವುದೇ ನಿಯಮಗಳನ್ನು ಜಾರಿ ಮಾಡಿಲ್ಲ ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ