ಹಿಟ್ ಆ್ಯಂಡ್ ರನ್: ರಸ್ತೆ ದಾಟುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಜಿಪ್ಸಿ | ಯುವಕನ ಸ್ಥಿತಿ ಗಂಭೀರ
ಕೊಟ್ಟಿಗೆಹಾರ: ಬಣಕಲ್ ಪೇಟೆಯಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆಗೆ ಸಾಗುತ್ತಿದ್ದ ಅಪರಿಚಿತ ಜಿಪ್ಸಿ ವಾಹನ ವ್ಯಕ್ತಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ವಿನಯ್ ಎಂಬ ಯುವಕ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
ಘಟನೆಯ ಹಿನ್ನಲೆ: ಬಣಕಲ್ ಸಮೀಪದ ಮತ್ತಿಕಟ್ಟೆಯಿಂದ ಬಿ.ಎಸ್. ರಕ್ಷಿತ್ ಅವರ ಬೈಕ್ ನಲ್ಲಿ ವಿನಯ್ ಸೇರಿ ಅಂಗಡಿ ದಿನಸಿ ತರಲು ಬಣಕಲ್ ಗೆ ಬಂದಿದ್ದರು. ಬೈಕನ್ನು ಆಲಂ ಸೂಪರ್ ಮಾರ್ಕೆಟ್ ಬಳಿ ನಿಲ್ಲಿಸಿ ಇತರ ವಸ್ತುಗಳನ್ನು ಖರೀದಿಸಲು ರಾತ್ರಿ 8 ಗಂಟೆ ಸಮಯದಲ್ಲಿ ವಿನಯ್ ರಸ್ತೆ ದಾಟುತ್ತಿದ್ದಾಗ ಮೂಡಿಗೆರೆ ಕಡೆಯಿಂದ ಕೊಟ್ಟಿಗೆಹಾರ ಕಡೆ ಸಾಗುವ ವಾಹನವು ಚಾಲಕನ ಅತಿಯಾದ ವೇಗದಿಂದ ವಿನಯ್ ಗೆ ಡಿಕ್ಕಿ ಹೊಡೆದಿದೆ. ವಿನಯ್ ಗಂಭೀರ ಗಾಯಗೊಂಡು ತಲೆಗೆ ಕಾಲಿಗೆ ಪೆಟ್ಟಾಗಿತ್ತು. ಆದರೆ ಅಪರಿಚಿತ ಜಿಪ್ಸಿ ವಾಹನ ನಿಲ್ಲಿಸದೇ ಕೊಟ್ಟಿಗೆಹಾರ ಕಡೆಗೆ ಸಾಗಿತ್ತು.
ಕೂಡಲೇ ಸ್ಥಳೀಯ ಯುವಕರು ನಮ್ಮ ಊರು ಬಣಕಲ್ ವ್ಯಾಟ್ಸಾಪ್ ಗ್ರೂಪಿನಲ್ಲಿ ಒಬ್ಬರಿಂದೊಬ್ಬರಿಗೆ ಜಿಪ್ಸಿ ಹಿಡಿಯುವಂತೆ ಬಾಳೂರು ಪೊಲೀಸ್ ಠಾಣೆ ಸುತ್ತಮುತ್ತ ಮಾಹಿತಿ ತಲುಪಿದ್ದು. ಬಾಳೂರು ಪೊಲೀಸರು ಬ್ಯಾರಿ ಕೇಡ್ ಗಳನ್ನು ಹಾಕಿ ವಾಹನ ನಿಲ್ಲಿಸಲು ಹೇಳಿದರೆ ಚಾಲಕ ಬ್ಯಾರಿ ಗೇಟ್ ಗೆ ಡಿಕ್ಕಿ ಹೊಡೆದು ವಾಹನವು ಎಲ್ಲಿಯೂ ನಿಲ್ಲಿಸದೇ ಗಬ್ಗಲ್ ಮೂಲಕ ನಾಪತ್ತೆಯಾಯಿತು.
ಕೆಲವು ಯುವಕರು ರಾತ್ರಿವರೆಗೂ ಬೆನ್ನಟ್ಟಿದರೂ ಇವರ ಸುಳಿವು ಸಿಗಲಿಲ್ಲ. ಬಾಳೂರು ಠಾಣೆಯ ಪೊಲೀಸರು ಹಿರೇಬೈಲ್, ಬಿಳಗಲಿ ಬಳಿ ಜಿಪ್ಸಿ ವಾಹನವನ್ನು ಹಿಡಿದು ಪೊಲೀಸ್ ಠಾಣೆಗೆ ತಂದರು. ಘಟನೆ ಬಣಕಲ್ ನಲ್ಲಿ ಆದುದರಿಂದ ಜಿಪ್ಸಿ ವಾಹನವನ್ನು ಬಣಕಲ್ ಗೆ ತಂದು ಪ್ರಕರಣ ದಾಖಲಿಸಲಾಯಿತು. ಗಾಯಾಳು ವಿನಯ್ ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.