ಹೆಚ್.ವಿಶ್ವನಾಥ್ ವಿಡಿಯೋ ಪ್ಲೇ ಆದ್ರೆ, ಅವರ ಸಂಸ್ಕೃತಿಯೂ ಗೊತ್ತಾಗುತ್ತದೆ | ರೇಣುಕಾಚಾರ್ಯ
ಬೆಂಗಳೂರು: ಹೆಚ್.ವಿಶ್ವನಾಥ್ ಅವರ ಆಡಿಯೋ, ವಿಡಿಯೋ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದು ಪ್ಲೇ ಆದ್ರೆ ಅವರ ಸಂಸ್ಕೃತಿ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿಶ್ವನಾಥ್ ಮೇಲೆ ಹರಿಹಾಯ್ದಿದ್ದಾರೆ.
ಸರ್ಕಾರದ ವಿರುದ್ಧ 20 ಸಾವಿರ ಕೋಟಿ ಟೆಂಡರ್ ಹಗರಣದ ಆರೋಪದ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಹೆಚ್. ವಿಶ್ವನಾಥ್ ಹತಾಶರಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಹೆಚ್. ವಿಶ್ವನಾಥ್ ಆಡಿಯೋ, ವಿಡಿಯೋ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ಲೇ ಆದರೆ ಅವರ ಸಂಸ್ಕೃತಿ ಎಂತಾದ್ದು ಎಂಬುದು ಗೊತ್ತಾಗುತ್ತೆ ಎಂದು ವೈಯಕ್ತಿಕ ದಾಳಿ ನಡೆಸಿದರು.
ವಿಶ್ವನಾಥ್ ಅವರು ಬಿ ಎಸ್ ವೈ, ಕುಮಾರಸ್ವಾಮಿ, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಹೆಚ್.ಡಿ. ದೇವೇಗೌಡ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಆ ವ್ಯಕ್ತಿ ನಾಲಿಗೆ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ನಾನು ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಆದರೆ ವಿಶ್ವನಾಥ್ ಇಂತಹ ಆರೋಪ ಮಾಡುವುದು ತಪ್ಪು ಎಂದು ಇದೇ ವೇಳೆ ಹೇಳಿದರು.
ನೀರಾವರಿ ಇಲಾಖೆ ಟೆಂಡರ್ ಪಾರದರ್ಶಕವಾಗಿ ನಡೆದಿದೆ. ನೀರಾವರಿ ಇಲಾಖೆಗೆ ಬಿಡುಗಡೆಯಾದ ಹಣ ಹಾಗೂ ಕಾಮಗಾರಿ ಪ್ರತಿಯೊಂದರ ಬಗ್ಗೆಯೂ ವೆಬ್ ಸೈಟ್ ನಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ಹೀಗಿರುವಾಗ ಅಕ್ರಮ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.