ಹಳೆಯ 100 ರೂಪಾಯಿಗಳ ರದ್ಧತಿಗೆ ಆರ್ ಬಿಐ ಚಿಂತನೆ | ಹಳೆಯ ನೋಟುಗಳನ್ನು ಏನು ಮಾಡಬೇಕು? | ಈ ಸುದ್ದಿ ಓದಿ
ಮಂಗಳೂರು: ಉತ್ತಮ ದರ್ಜೆಯ ನೋಟುಗಳು ಜನರಿಗೆ ಸಿಗುವಂತಾಗಲು ಹಳೆಯ 100 ರೂಪಾಯಿಗಳನ್ನು ಹಿಂಪಡೆಯಲು ಆರ್ ಬಿಐ ಚಿಂತನೆ ನಡೆಸಿದೆ ಎಂದು ಆರ್ ಬಿಐ ಎಜಿಎಂಪಿ ಮಹೇಶ್ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣ ಸಮಿಸಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದು ನಗದು ಅಪಮೌಲೀಕರಣ ಅಲ್ಲ. ಬದಲಾಗಿ ಜನರಿಗೆ ಉತ್ತಮ ಗುಣಮಟ್ಟದ ನೋಟುಗಳು ಸಿಗುವಂತೆ ಮಾಡುವ ಉದ್ದೇಶ ಅಷ್ಟೆ ಎಂದು ಅವರು ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ 100 ರೂ.ಗಳ ಹೊಸ ನೋಟುಗಳು ಮಾತ್ರವೇ ಹೆಚ್ಚಾಗಿ ಚಾಲ್ತಿಗೆ ಬರುತ್ತವೆ. ಹಳೆಯ ನೋಟುಗಳನ್ನು ಇಟ್ಟುಕೊಳ್ಳದೇ ಕರೆನ್ಸಿ ಚೆಸ್ಟ್ ಗೆ ಒಪ್ಪಿಸಬೇಕು ಎಂದು ಅವರು ಹೇಳಿದರು.
ಆರ್ ಬಿಐ ಸ್ವಚ್ಛ ನೋಟು ನೀತಿಯನ್ನು ಪಾಲಿಸಲು ಪ್ರೋತ್ಸಾಹಿಸುತ್ತಿದೆ. ಎಟಿಎಂಗಳಲ್ಲಿ ಹೊಸ, ಉತ್ತಮ ದರ್ಜೆಯ ನೋಟುಗಳು ಸಿಗುವಂತಾಗಬೇಕು. ಅದಕ್ಕಾಗಿ ಹಳೆಯ ಕೊಳಕು ನೋಟುಗಳನ್ನು ಚೆಸ್ಟ್ ಗೆ ಹಿಂದಿರುಗಿಸಬೇಕು.
ಇನ್ನೂ 10 ರೂ. ನಾಣ್ಯಗಳು ನಕಲಿಯಾಗಿರಲು ಸಾಧ್ಯವಿಲ್ಲ. ಹೀಗಾಗಿ ಇದರ ಕುರಿತಾಗಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕು. ಸರ್ಕಾರಿ ಕಚೇರಿಗಳಲ್ಲಿ ಈ ನಾಣ್ಯ ಸ್ವೀಕರಿಸಿ ಚಲಾಯಿಸಲು ಇಚ್ಚಾಶಕ್ತಿ ತೋರಬೇಕು ಎಂದು ಅವರು ಹೇಳಿದರು.
ಹರಿದ ನೋಟುಗಳನ್ನು ತಿರಸ್ಕರಿಸಬಾರದು
ಹರಿದ ನೋಟುಗಳನ್ನು ವಿನಿಮಯಕ್ಕೆ ತಂದರೆ ಅವುಗಳನ್ನು ತಿರಸ್ಕರಿಸಬಾರದು. ಬ್ಯಾಂಕ್ ಗಳು ಈ ನಿಟ್ಟಿನಲ್ಲಿ ಸೇವಾ ಮನೋಭಾವನೆಯನ್ನು ಹೊಂದ ಬೇಕು. ಬ್ಯಾಂಕ್ ಗಳ ಕ್ಯಾಷಿಯರ್ ಗಳು ಹರಿದ ಕೊಳಕು ನೋಟುಗಳ ವಿನಿಮಯ ಆರ್ ಬಿಐಗೆ ಬಿಟ್ಟ ವಿಚಾರ ಎಂದು ಭಾವಿಸಿರುವಂತಿದೆ. ಅಂತಹ ನಿಲುವಿನಲ್ಲಿ ಎಂದಿಗೂ ಬ್ಯಾಂಕ್ ಗಳ ಕ್ಯಾಷಿಯರ್ ಗಳು ಇರಬಾರದು ಎಂದು ಅವ ಮಹೇಶ್ ಹೇಳಿದರು.