ಹಣ ಸಂಪಾದಿಸಲು ಅಡ್ಡ ಮಾರ್ಗ ಹಿಡಿದ ಮೂವರು ಯುವಕರ ಬಂಧನ | ಅಷ್ಟಕ್ಕೂ ಇವರು ಮಾಡಿದ್ದೇನು ಗೊತ್ತಾ?
ಯಾದಗಿರಿ: ಆರ್ ಟಿಒ ಅಧಿಕಾರಿಗಳೆಂದು ನಂಬಿಸಿ ವಾಹನ ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಹಂದರಕಿ ಕ್ರಾಸ್ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಆರ್ ಟಿಒ ಅಧಿಕಾರಿಗಳ ಸೋಗಿನಲ್ಲಿಯೇ ವಾಹನಗಳನ್ನು ತಡೆಯುತ್ತಿದ್ದರು. ಬಳಿಕ ವಾಹನ ಸವಾರರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಯುವಕರ ವರ್ತನೆ ಕಂಡು ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಬಂದಿದ್ದು, ಈ ವೇಳೆ ಈ ಯುವಕರು ನಕಲಿ ಆರ್ ಟಿಒ ಅಧಿಕಾರಿಗಳು ಎನ್ನುವುದು ತಿಳಿದು ಬಂದಿದೆ. ತಕ್ಷಣವೇ ಯುವಕರನ್ನು ಬಂಧಿಸಿ ಮೂವರ ಮೇಲೆಯೂ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹಣ ಮಾಡಲು ಸುಲಭದ ದಾರಿಯನ್ನು ಹುಡುಕಿರುವ ಯುವಕರು ಇದೀಗ ಪೊಲೀಸರ ಬಂಧನದಲ್ಲಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದು ಮೊದಲ ಬಾರಿಗೆ ಇವರು ಈ ಕೃತ್ಯ ನಡೆಸಿದ್ದಾರೋ ಅಥವಾ ಈ ಹಿಂದಿನಿಂದಲೂ ಇದೇ ಕೆಲಸವನ್ನು ಮಾಡುತ್ತಿದ್ದಾರೋ ತಿಳಿದು ಬಂದಿಲ್ಲ. ಇನ್ನುಷ್ಟು ವಿವರಗಳು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.