ಇದೆಂತಹ ದುಸ್ಥಿತಿ: ಅನಾರೋಗ್ಯಕ್ಕೀಡಾದ ವ್ಯಕ್ತಿಯನ್ನು 10 ಕಿ.ಮೀ. ಡೋಲಿ ಹೊತ್ತು ಆಸ್ಪತ್ರೆಗೆ ರವಾನೆ!!
ಚಾಮರಾಜನಗರ: ಅನಾರೋಗ್ಯಕ್ಕೀಡಾದ ವ್ಯಕ್ತಿಯನ್ನು ವಾಹನ ಸೌಕರ್ಯ ಇಲ್ಲದಿದ್ದರಿಂದ 10 ಕಿಮೀ. ಡೋಲಿ ಮೂಲಕ ಆಸ್ಪತ್ರೆಗೆ ರವಾನಿಸಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆ ಗ್ರಾಮದಲ್ಲಿ ಇಂದು ನಡೆದಿದೆ.
ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ದೊಡ್ಡಾಣೆ ಗ್ರಾಮದ ಮಹದೇವ್( 62) ಎಂಬವರು ಇಂದು ಮಧ್ಯಾಹ್ನ ತೀವ್ರ ಅಸ್ವಸ್ಥರಾದ ಕಾರಣ ಡೋಲಿ ಮೂಲಕ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪ್ರಾಧಿಕಾರದವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಕಾಡಂಚಿನ ಗ್ರಾಮಗಳ ರಸ್ತೆ ತಲೆಗೆಟ್ಟಿರುವುದರಿಂದ 108 ತುರ್ತು ವಾಹನ ತೆರಳಲು ಸಾಧ್ಯವಾಗುತ್ತಿಲ್ಲ ಇದರಿಂದ ಇಲ್ಲಿಯ ರೋಗಿಗಳು ನರಕ ಅನುಭವಿಸುವಂತಾಗಿದೆ.
ಗರ್ಭಿಣಿಯರನ್ನು ಆಸ್ಪತ್ರೆಗೆ ಡೋಲಿಯಲ್ಲಿ ಕರೆ ತರುವ ವೇಳೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯೂ ಆಗಿದೆ. ಕೆಲವರು ಮಾರ್ಗ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಇಷ್ಟಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಜನವನ ಸಾರಿಗೆ ಸ್ತಬ್ಧ: ಈ ಹಿಂದೆ ಮೆಂದಾರೆ,ತುಳಸಿಕೆರೆ, ಇಂಡಿಗನತ್ತ, ಪಡಸಲನತ್ತ, ಮೆದಗನಾಣೆ, ಪಾಲಾರ್, ದೊಡ್ಡಣೆ, ತೊಕೆರೆ, ಕೊಕ್ಕಬರೆ ಗ್ರಾಮಗಳಿಗೆ ಜನವನ ಸಾರಿಗೆ ಎಂಬ ಯೋಜನೆ ಆರಂಭಿಸಿ ಮೂರು ಜೀಪ್ ಗಳನ್ನು ಕೊಡಲಾಗಿತ್ತು. ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ಆಸ್ಪತ್ರೆಗೆ ತೆರಳಲು, ನಿತ್ಯದ ಸಂಚಾರಕ್ಕಾಗಿ ಒಂದೆರೆಡು ತಿಂಗಳು ವಾಹನ ಬಳಕೆಯಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ರಸ್ತೆ ಹದಗೆಟ್ಟಿರುವುದರಿಂದ ಹಾಗೂ ಚಾಲಕರಿಗೆ ಸಂಬಳ ನೀಡದೆ ಇರುವುದರಿಂದ ಜನವನ ಇದ್ದೂ ಇಲ್ಲದಂತಾಗಿದೆ. ಇಂಡಿಗನತ್ತ ಗ್ರಾಮದ ರಸ್ತೆಯನ್ನು ದುರಸ್ತಿ ಪಡಿಸಲಾಗುತ್ತಿದೆ, ಅರಣ್ಯ ಇಲಾಖೆಯವರು ಚಾಲಕನನ್ನು ನೇಮಕ ಮಾಡಿದರೇ ಈ ಮಾರ್ಗವಾಗಿ ಜನಮನ ವಾಹನ ಪ್ರಾರಂಭ ಮಾಡುತ್ತೇವೆ ಎಂದು ಇಡಿಸಿ ಅಧ್ಯಕ್ಷ ತೊಳಸಿಕೆರೆ ಕೆಂಪ್ಪಣ್ಣ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ, 5 ಜಿ ಯುಗಕ್ಕೆ ಭಾರತ ಕಾಲಿಟ್ಟು ಎಕ್ಸ್‌ಪ್ರೆಸ್ ವೇಗಳು ನಿರ್ಮಾಣವಾಗುತ್ತಿವೆ. ಆದರೆ, ಮತ್ತೊಂದೆಡೆ ಕನಿಷ್ಠ ಸೌಲಭ್ಯವೂ ಇಲ್ಲದೇ ಡೋಲಿ ಆಶ್ರಯಿಸಬೇಕಾಗಿರುವುದು ವಿಪರ್ಯಾಸವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw