ಮಂಗಳೂರು: ಬಡ ಬೀದಿಬದಿ ವ್ಯಾಪಾರಿಗಳ ಹೊಟ್ಟೆಗೆ ಮೇಲೆ ಹೊಡೆಯುತ್ತಿರುವ ನಗರಪಾಲಿಕೆ ಅಧಿಕಾರಿಗಳು
ಮಂಗಳೂರು ನಗರದ ಪುರಭವನ ಮತ್ತು ಮೈದಾನ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಭಾನುವಾರದ ರಜಾದಿನ ಬಟ್ಟೆ, ತರಕಾರಿ, ಹಣ್ಣು, ರೇಷನ್ ಸಾಮಾಗ್ರಿಗಳನ್ನು ಮಾರಾಟ ಮಾಡಿ ಬದುಕುತ್ತಿರುವ ಬಡ ಬೀದಿ ವ್ಯಾಪಾರಿಗಳಿಗೆ ಕಳೆದ ಭಾನುವಾರ ವ್ಯಾಪಾರ ಮಾಡಲು ನಗರಪಾಲಿಕೆಯ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು ಅವರ ಸರಕುಗಳನ್ನು ವಶಪಡಿಸಿದ್ದರು. ಈ ದಿನ ಭಾನುವಾರ ಮುಂಜಾನೆ ಸಮಯ ವ್ಯಾಪಾರ ಆರಂಭಿಸಿದಾಗ ನಗರಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಪೊಲೀಸ್ ಮತ್ತು ಪಾಲಿಕೆಯ ಪೌರ ಕಾರ್ಮಿಕರನ್ನು ಮತ್ತು ಬಡ ಬೀದಿ ವ್ಯಾಪಾರಿಗಳ ವಸ್ತುಗಳನ್ನು ವಶಪಡಿಸಿ ಸಾಗಿಸಲು ಕಸ ವಿಲೇವಾರಿಯ ಲಾರಿಗಳನ್ನು ತಂದು ದಾಳಿ ಮಾಡಲು ಮುಂದಾದಾಗ ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಮುಖಂಡರು ಅಲ್ಲಿಗೆ ಬಂದು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ದಾಳಿ ಮಾಡಲು ಆಯುಕ್ತರ ಲಿಖಿತ ಆದೇಶವನ್ನು ಕೇಳಿದ್ದಾರೆ.
ಪಟ್ಟಣ ವ್ಯಾಪಾರ ಸಮಿತಿಯಲ್ಲಿ ತೀರ್ಮಾನ ಆಗದೇ ಯಾವುದೇ ದಾಳಿ ನಡೆಸುವುದು ಕಾನೂನಿನ ಉಲ್ಲಂಘನೆ ಆಗುತ್ತದೆ. ಕಳೆದ ಭಾನುವಾರ ವಶಪಡಿಸಿದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸರಕುಗಳನ್ನು ವಾಪಾಸು ನೀಡದೆ ನಿಯಮ ಮೀರಿ ವಿಲೇವಾರಿ ಮಾಡಿರುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಘದ ಮುಖಂಡರು ಬಡ ಬೀದಿವ್ಯಾಪಾರಿಗಳಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಪಟ್ಟು ಹಿಡಿದರು. ಈ ಮಧ್ಯೆ ಅಧಿಕಾರಿಗಳು ಪುರಭವನದ ಒಳಗಿಂದ ಪೈಪ್ ಮೂಲಕ ನೀರು ಹಾಯಿಸಿ ವ್ಯಾಪಾರಿಗಳ ಸರಕುಗಳನ್ನು ಹಾನಿಗೊಳಿಸುವ ಅಮಾನವೀಯತೆಯನ್ನು ತೋರಿದ ಅಧಿಕಾರಿಗಳಿಗೆ ವ್ಯಾಪಾರಿಗಳು ಹಿಡಿಶಾಪ ಹಾಕಿದರು. ವ್ಯಾಪಾರಿಗಳ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್, ಅಮಾನವೀಯವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಆಯುಕ್ತರು ಕ್ರಮ ಕೈಗೊಳ್ಳಬೇಕು. ವಾರದ ಸಂತೆ ಮತ್ತು ಭಾನುವಾರದ ರಜಾದಿನಗಳಲ್ಲಿ ವ್ಯಾಪಾರ ಮಾಡುವ ಬಡ ಬೀದಿ ವ್ಯಾಪಾರಿಗಳನ್ನು ಸಮೀಕ್ಷೆ ನಡೆಸಿ ಅವರಿಗೂ ಗುರುತಿನ ಚೀಟಿ, ಪ್ರಮಾಣ ಪತ್ರ ವಿತರಣೆಗೆ ಕ್ರಮ ವಹಿಸಬೇಕು, ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014 ಮತ್ತು ಕರ್ನಾಟಕ ಬೀದಿ ವ್ಯಾಪಾರದ ನಿಯಮಗಳು 2019ರಲ್ಲಿ ವಾರದ ಸಂತೆ, ಬಜಾರ್ ಗಳಲ್ಲಿ ಭಾನುವಾರದ ವ್ಯಾಪಾರ, ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರ ಮಾಡುವವರನ್ನು ಒಳಗೊಂಡಿದ್ದು ಅದರಂತೆ ಅವರಿಗೂ ಕಾನೂನಿನ ಮಾನ್ಯತೆ ನೀಡಿ ನೀತಿಗಳನ್ನು ರೂಪಿಸಬೇಕೆಂದು ಒತ್ತಾಯಿಸಿ ಅವರು ಬಡ ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಮುಖಂಡರಾದ ಹರೀಶ್ ಪೂಜಾರಿ, ಶ್ರೀಧರ ಭಂಡಾರಿ, ಸಿದ್ದಮ್ಮ, ರೂಪೇಶ್, ಮಹೇಶ್, ಸಯ್ಯದ್ ಪಾಷ, ಆಸೀಫ್ ಬಾವ ಉರುಮನೆ, ನೌಶಾದ್ ಉಳ್ಳಾಲ, ರಿಯಾಜ್ ಎಲ್ಯರ್ ಪದವು, ರಝಕ್ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw