ಹರೇಕಳ ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಡಿವೈಎಫ್’ಐ ಒತ್ತಾಯ

ಮಂಗಳೂರು: ಅಡ್ಯಾರ್ ಮತ್ತು ಹರೇಕಳ ಸಂಪರ್ಕ ಮಾಡುವ ಸಲುವಾಗಿ ಹರೇಕಳ ಗ್ರಾಮ ವ್ಯಾಪ್ತಿಗೆ ಬರುವ ನೇತ್ರಾವತಿ ನದಿಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಆಣೆಕಟ್ಟು ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುತ್ತದೆ.
ಆದರೆ ಸೇತುವೆಯನ್ನು ಸಂಪರ್ಕಿಸುವಲ್ಲಿ ರಸ್ತೆ ಕಾಮಗಾರಿ ಸಮರ್ಪಕವಾಗಿ ಮಾಡದೇ ಇರುವುದರಿಂದ ನಾಗರಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಅಣೆಕಟ್ಟು ನಿರ್ಮಾಣದ ನಂತರ ಸಂಚಾರಿ ದೋಣಿ ನಿರ್ವಾಹಕರು ದೋಣಿ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.
ಇದರಿಂದಾಗಿ ದಿನನಿತ್ಯ ನಗರಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ನದಿ ಆಚೆಗಿನ ಪ್ರಯಾಣಕ್ಕೆ ಸಮಸ್ಯೆ ಉಂಟಾಗಿದೆ. ಸೇತುವೆ ಮೇಲೆ ನಾಗರಿಕರಿಗೆ ನಡೆದಾಡಲು ಸಂಜೆ 7ರ ನಂತರ ಮುಂಜಾನೆ 6ಗಂಟೆಯ ತನಕ ನಿರ್ಬಂಧ ಹೇರಿ ಸೇತುವೆಯ ಕಾಮಗಾರಿ ಪೂರ್ಣಗೊಂಡರೂ ಎರಡು ಬದಿಗಳಲ್ಲಿ ಗೇಟುಗಳನ್ನು ಮುಚ್ಚಿರುವ ಸಣ್ಣ ನೀರಾವರಿ ಇಲಾಖೆಯ ತೀರ್ಮಾನದಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಅನುಭವಿಸುವಂತಾಗಿದೆ.
ಸಂಜೆ 7ರ ನಂತರ ಬರುವ ನಾಗರಿಕರು ಬೇಲಿ ಹಾರಿ ಬರುವ ಪರಿಸ್ಥಿತಿ ಇದ್ದು ಇದರಿಂದ ನಾಗರಿಕರ ಜೀವಕ್ಕೆ ಹಾನಿ ಆಗುವ ಸಾಧ್ಯತೆ ಇದ್ದು ಕೂಡಲೇ ಸಾರ್ವಜನಿಕರಿಗೆ 24ಗಂಟೆ ಮುಕ್ತ ಓಡಾಟಕ್ಕೆ ಅವಕಾಶ ಕೊಡಬೇಕಾಗಿ ಡಿವೈಎಫ್ಐ ಒತ್ತಾಯಿಸಿದೆ. ಅಲ್ಲದೆ ಲಘು ವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲ ಆಗುವಂತೆ ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣ ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಾಗಿ ಇಂದು ಡಿವೈಎಫ್ ಐ ನಾಯಕರ ನಿಯೋಗವು ಜಲಸಂಪನ್ಮೂಲ ಇಲಾಖೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿ ಮುಂದಿನ 15 ದಿನದ ಒಳಗಾಗಿ ಸಾರ್ವಜನಿಕರಿಗೆ ಮುಕ್ತವಾಗಿ ನಡೆದಾಡಲು ಅವಕಾಶ ಮಾಡಿಕೊಡಲು ಅಸಾಧ್ಯವಾದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಹೋರಾಟವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ.
ಡಿವೈಎಫ್’ಐ ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್, ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ಹರೇಕಳ ಗ್ರಾಮ ಸಮಿತಿ ಕಾರ್ಯದರ್ಶಿ ರಿಜ್ವಾನ್ ಖಂಡಿಗೆ ಉಪಸ್ಥಿತರಿದ್ದರು ಎಂದು ಡಿವೈಎಫ್’ಐ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka