ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ!
ಹಾಂಗ್ ಕಾಂಗ್ (ಸಿಂಗಾಪುರ್): ಆರೋಗ್ಯಕ್ಕೆ ಹಾನಿಕಾರಕ ಅಂಶವನ್ನು ಅತಿಯಾಗಿ ಬಳಸಿರುವ ಆರೋಪದಲ್ಲಿ ಭಾರತದ ಅತ್ಯಂತ ಜನಪ್ರಿಯ ಎವರೆಸ್ಟ್ ಫಿಶ್ ಕರಿ ಮಸಾಲವನ್ನು ಹಿಂಪಡೆಯಲು ಸಿಂಗಾಪುರ್ ಫುಡ್ ಏಜೆನ್ಸಿ ಭಾರತ ಮೂಲದ ಕಂಪನಿಗೆ ಸೂಚಿಸಿದೆ.
ಎವರೆಸ್ಟ್ ಫಿಶ್ ಕರಿ ಮಸಾಲದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥಿಲೀನ್ ಆಕ್ಸೈಡ್ ಎಂಬ ಕೀಟನಾಶಕವನ್ನು ಬಳಸಲಾಗಿದೆ ಎಂದು ಸಿಂಗಾಪುರ್ ಫುಡ್ ಏಜೆನ್ಸಿ ಆರೋಪಿಸಿದೆ.
ಈ ರಾಸಾಯನಿಕವು ಮಾನವ ಬಳಕೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಫಿಶ್ ಕರಿ ಉತ್ಪನ್ನದಲ್ಲಿ ಎಥಿಲೀನ್ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮಸಾಲೆ ಉತ್ಪನ್ನವನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅನುಮತಿಸಲಾದ ಮಿತಿಗಳನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಗಮನಿಸಿದ ಹಾಂಗ್ ಕಾಂಗ್ ನ ಆಹಾರ ಸುರಕ್ಷತಾ ಕೇಂದ್ರವು ಹೊರಡಿಸಿದ ಅಧಿಸೂಚನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಿಂಗಾಪುರ್ ಫುಡ್ ಏಜೆನ್ಸಿ ಬಿಡುಗಡೆ ಮಾಡಿರುವ ಹೇಳಿಕೆಯನ್ನು ನೋಡುವುದಾದರೆ, “ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಎಥಿಲೀನ್ ಆಕ್ಸೈಡ್ ಇರುವ ಕಾರಣ ಹಾಂಗ್ ಕಾಂಗ್ ನ ಆಹಾರ ಸುರಕ್ಷತಾ ಕೇಂದ್ರವು ಭಾರತದಿಂದ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಅಧಿಸೂಚನೆ ಹೊರಡಿಸಿದೆ” ಎಂದು ಹೇಳಿದೆ.
ಇದರ ನಂತರ ಸಿಂಗಾಪುರ್ ಫುಡ್ ಏಜೆನ್ಸಿ ಆಮದುದಾರ ಎಸ್ ಪಿ ಮುತ್ತಯ್ಯ & ಸನ್ಸ್ ಪ್ರೈವೇಟ್ ಲಿಮಿಟೆಡ್ ಗೆ ಆಹಾರ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ ಉತ್ಪನ್ನಗಳನ್ನು ಹಿಂಪಡೆಯಲು ಪ್ರಾರಂಭಿಸಲು ನಿರ್ದೇಶನ ನೀಡಿದೆ.
ರಾಸಾಯನಿಕ ಅಂಶ ಇರುವ ಮಸಾಲಾ ಸೇವನೆಯಿಂದ ತಕ್ಷಣಕ್ಕೆ ಅಪಾಯ ಇಲ್ಲದಿದ್ದರೂ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಎವರೆಸ್ಟ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth