ಹತ್ರಸ್ ಅತ್ಯಾಚಾರ ಪ್ರಕರಣ | ಪ್ರಕರಣ ಮುಚ್ಚಿ ಹಾಕಲು ಉತ್ತರಪ್ರದೇಶ ಸರ್ಕಾರದಿಂದ ಯತ್ನ | ಸತ್ಯಶೋಧನಾ ಸಮಿತಿ ವರದಿ ಬಹಿರಂಗ
ಹತ್ರಸ್: ಉತ್ತರಪ್ರದೇಶದ ಹತ್ರಸ್ ನಲ್ಲಿ ಕೆಟ್ಟ ಜಾತಿಯವರಿಂದ ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಹತ್ಯೆಯಾದ ಯುವತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಶೋಧನಾ ಸಮಿತಿಯು ಮಂಗಳವಾರ ತನ್ನ ವರದಿ ನೀಡಿದೆ.
ಅತ್ಯಾಚಾರವನ್ನು ಸಾಬೀತುಪಡಿಸಲು ಅಸಾಧ್ಯವಾಗಬೇಕು ಎನ್ನುವುದಕ್ಕಾಗಿ, ಪುರಾವೆಗಳನ್ನು ನಾಶ ಮಾಡಲು ವೈದ್ಯಕೀಯ ಸೌಲಭ್ಯಗಳಲ್ಲಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಲಾಗಿದೆ. ಇದು ಸಾಕ್ಷಿ ನಾಶಕ್ಕಾಗಿ ಮಾಡಿರುವ ಕೃತ್ಯ ಎನ್ನುವುದು ಸ್ಪಷ್ಟ ಎಂದು ಸತ್ಯಶೋಧನಾ ಸಮಿತಿ ಹೇಳಿದೆ.
ಘಟನೆಯ ಬಳಿಕ ಜಿಲ್ಲಾಡಳಿತವು ಸಂತ್ರಸ್ತೆಯ ತಂದೆಗೆ, “ತನಿಖೆ ಹಾಗೂ ಚಿಕಿತ್ಸೆಯನ್ನು ಸರಿಯಾಗಿ ಮಾಡಲಾಗಿದೆ” ಎಂದು ಹೇಳುವಂತೆ ಒತ್ತಡ ಹೇರಿತ್ತು. ಈ ಪ್ರಕರಣವನ್ನು ಶಾಶ್ವತವಾಗಿ ಮುಚ್ಚಿ ಹಾಕಲು ರಾಜ್ಯ ಸರ್ಕಾರ ನಡೆಸಿದ ಸಿದ್ಧತೆ ಇದಾಗಿದೆ ಎಂದು ಸಮಿತಿ ತಿಳಿಸಿದೆ.
ಈ ಸತ್ಯಶೋಧನಾ ಸಮಿತಿಯಲ್ಲಿ ಮೇಧಾ ಪಾಟ್ಕರ್, ಸಂದೀಪ್ ಪಾಂಡೆ, ಮಣಿಮಾಲಾ ಹಾಗೂ ದಿಲ್ಲಿ ಏಕತಾ ಗುಂಪಿನ ಸದಸ್ಯರು ಸೇರಿದಂತೆ 9 ಸದಸ್ಯರಿದ್ದಾರೆ. ಸತ್ಯಶೋಧನಾ ಸಮಿತಿಯು ಹೇಳಿರುವಂತೆ, ರಾಜ್ಯ ಸರ್ಕಾರವು ಈ ಅತ್ಯಾಚಾರ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಸಿದ್ಧತೆ ನಡೆಸಿದೆ ಎಂದು ಹೇಳಿದೆ.