ಹಾಸನದಲ್ಲಿ ಭೀಕರ ಅಪಘಾತ; ದಕ್ಷಿಣ ಕನ್ನಡ ಮೂಲದ ಮೂವರ ದಾರುಣ ಸಾವು
ಹಾಸನ: ದಕ್ಷಿಣ ಕನ್ನಡ ಜಿಲ್ಲೆ ಮೂಲದ ನಿವಾಸಿಗಳು ಪ್ರಯಾಣಿಸುತ್ತಿದ್ದ ಕಾರೊಂದು ಹಾಸನದಲ್ಲಿ ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಹಾಸನದ ಹೊರವಲಯದ ಕೆಂಚಟ್ಟಹಳ್ಳಿ ಬಳಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಮನೆಯ ನಿವಾಸಿಗಳಾದ 25 ವರ್ಷ ವಯಸ್ಸಿನ ಜಯಪ್ರಕಾಶ ಹಾಗೂ 23 ವರ್ಷ ವಯಸ್ಸಿನ ಯೋಗೀಶ್ ಹಾಗೂ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ಇಬ್ಬರ ಗುರುತು ಮಾತ್ರವೇ ಪತ್ತೆಯಾಗಿದ್ದು, ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.
ಹಾಸನದ ಕೆಂಚಟ್ಟಹಳ್ಳಿಯ ಬಳಿಯಲ್ಲಿ ಲಾರಿಯೊಂದಕ್ಕೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮವಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಕೆಂಚಟ್ಟಹಳ್ಳಿ ಹಂಪ್ಸ್ ಬಳಿಯಲ್ಲಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಇದನ್ನು ಕಾರು ಚಾಲಕ ಗಮನಿಸುವ ಮೊದಲೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದು, ತನಿಖೆ ನಡೆಸುತ್ತಿದ್ದಾರೆ.